ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ವಿ.ವಿ.ಪುರಂ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತನ ಪತ್ನಿ ಹಾಗೂ ಸ್ನೇಹಿತ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶಿವಕುಮಾರ ಅಲಿಯಾಸ್ ಸಾಧಿಕ್ (40) ಮೃತ ವ್ಯಕ್ತಿ. ದೊಡ್ಡಬಳ್ಳಾಪುರ ಮೂಲದ ಶಿವಕುಮಾರ್ ತಾಲೂಕಿನ ಡಿ.ಪಾಳ್ಯ ಗ್ರಾಮದ ರೇಷ್ಮಾ (37) ಎಂಬುವವರನ್ನು 18 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ 16 ವರ್ಷದ ಗಂಡು ಹಾಗೂ 10 ವರ್ಷದ ಹೆಣ್ಣು ಮಗು ಇದೆ. ಪದೇ ಪದೆ ಮನೆ ಬದಲಿಸುತ್ತಿದ್ದ ಇವರು ಕೆಲವು ತಿಂಗಳಿಂದ ನಗರದ ವಿ.ವಿ.ಪುರಂ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಾತ್ರಿ ಹೆಂಡತಿ ಮಕ್ಕಳ ಜೊತೆ ಮಲಗಿದ್ದಾಗಲೇ ಹಾಸಿಗೆಯಲ್ಲಿ ಸಾವನ್ನಪ್ಪಿದ್ದಾನೆ. ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಹಣೆ ಮತ್ತು ಕಾಲಿಗೆ ತೀವ್ರ ಗಾಯಗಳಾಗಿದ್ದು, ಇದು ಪೂರ್ವ ನಿಯೋಜಿತ ಕೊಲೆ ಎಂಬ ಆರೋಪ ಕೇಳಿ ಬಂದಿದೆ. ಮೃತನ ಪತ್ನಿ ರೇಷ್ಮಾ ಹಾಗೂ ಆಕೆಯ ಸ್ನೇಹಿತ ಶಾರುಖ್ ಮೇಲೆ ಅನುಮಾನ ವ್ಯಕ್ತಪಡಿಸಿ ಮೃತನ ಸಹೋದರ ಯಲ್ಲಪ್ಪ ದೂರು ಸಲ್ಲಿಸಿದ್ದಾರೆ.
ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೇಷ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.