ಚಿಕ್ಕಬಳ್ಳಾಪುರ: ಕಳ್ಳರ ಮನಸ್ಸು ನುಣ್ಣಗೆ ಎಂದು ಹೇಳುವ, ಭೂ ಸ್ವಾಧೀನ ವಿರೋಧಿಸುವ ಸಂಘಟನೆಯೊಂದಿಗೆ ನಾಯಕರೊಬ್ಬರು ಗುರುತಿಸಿಕೊಂಡಿದ್ದವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೈಗಾರಿಕಾಭಿವೃದ್ಧಿಗೆ ಏಕೆ ಹೆಚ್ಚು ಒತ್ತು ನೀಡಲಿಲ್ಲ ಎಂದು ಪರೋಕ್ಷವಾಗಿ ಸಂಸದ ಡಾ ಕೆ.ಸುಧಾಕರ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಕಿಡಿಕಾರಿದ್ದಾರೆ.
ಚಿಂತಾಮಣಿ ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಅವಧಿಯಲ್ಲಿ ಅಮಾಯಕರ ಸಾವಿಗೆ ಕಾರಣರಾದವರು ನನ್ನ ಬಗ್ಗೆ ಟೀಕಿಸುತ್ತಾರೆ. ಗಂಭೀರ ಆರೋಪಗಳ ಬಗ್ಗೆ ಅವರು ಮಾತನಾಡಬೇಕು ಎಂದರು.
ರಾಜ್ಯಕ್ಕೆ ಇಬ್ಬರಲ್ಲಿ ಕಳ್ಳರು ಯಾರು ಎನ್ನುವುದು ಜನರಿಗೆ ಗೊತ್ತಾಗಲಿ, ಇಬ್ಬರು ಒಂದು ಕಡೆ ನಿಂತುಕೊಳ್ಳುತ್ತೇವೆ. ಆಗ ಜನರೇ ಕಳ್ಳನನ್ನು ಗುರುತಿಸಲಿ ಎಂದು ವ್ಯಂಗ್ಯವಾಡಿದರು.
ಅವರದ್ದೇ ಪಕ್ಷದ ಬೆಂಬಲಿಗರು ನಾಯಕರ ಬಗ್ಗೆ ಏನೇನು ಮಾತನಾಡಿದ್ದಾರೆ?. ಏನೇನು ಟೀಕಿಸಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಅವರು ಯಾವ ರೆಸಾರ್ಟ್ ಗಳಲ್ಲಿ, ಯಾವ್ಯಾವ ಪ್ರಭಾವಿಗಳೊಂದಿಗೆ ಏನೇನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕಾ?. ಇದಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಹೊರಬರಲಿ ಎಂದರು.