ಚಿಂತಾಮಣಿ ತಾಲೂಕಿನ ಕದಿರೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಡಾ.ಜಿಲಾನಿ, ಮುಖ್ಯಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಇತರರು ಇದ್ದರು.  Let everyone consume nutritious food.
ಚಿಕ್ಕಬಳ್ಳಾಪುರ

ಎಲ್ಲರೂ ಪೌಷ್ಟಿಕ ಆಹಾರ ಸೇವಿಸಲಿ |Let everyone consume nutritious food.

ಪೌಷ್ಟಿಕ ಆಹಾರ ಸೇವನೆ ಹಾಗೂ ದೈಹಿಕ ಶುಚಿತ್ವದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಚಿಂತಾಮಣಿ ತಾಲೂಕು ಆರೋಗ್ಯ ಕೇಂದ್ರದ ಡಾ.ಜಿಲಾನಿ ತಿಳಿಸಿದರು.

  • ತಾಲೂಕು ಆರೋಗ್ಯ ಕೇಂದ್ರದ ಡಾ.ಜಿಲಾನಿ ಸಲಹೆ

ಚಿಂತಾಮಣಿ: ಪೌಷ್ಟಿಕ ಆಹಾರ ಸೇವನೆ ಹಾಗೂ ದೈಹಿಕ ಶುಚಿತ್ವದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಚಿಂತಾಮಣಿ ತಾಲೂಕು ಆರೋಗ್ಯ ಕೇಂದ್ರದ ಡಾ.ಜಿಲಾನಿ ತಿಳಿಸಿದರು.

ತಾಲೂಕಿನ ಕದಿರೇನಹಳ್ಳಿ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಸಾಂಕ್ರಾಮಿಕ ರೋಗಗಳು, ರಕ್ತಹಿನತೆ ಹಾಗೂ ದೈಹಿಕ ದುರ್ಬಲತೆ ತಡೆಗೆ ಪ್ರತಿದಿನ ಹಾಲು, ಮೊಟ್ಟೆ, ತರಕಾರಿ, ಸೊಪ್ಪು, ಮೊಳಕೆ ಕಾಳುಗಳನ್ನು ನಿಯಮಿತವಾಗಿ ಸೇವಿಸಿ ಸದೃಢ ದೇಹವನ್ನು ರೂಪಿಸಿಕೊಳ್ಳಬೇಕು. ದಿನನಿತ್ಯ ಸ್ನಾನ ಮಾಡುವುದು, ಶುಚಿ ಬಟ್ಟೆ ಧರಿಸುವುದು, ಸುತ್ತಲಿನ ಪರಿಸರ ಕಲ್ಮಶವಾಗದಂತೆ ನೋಡಿಕೊಳ್ಳುವುದು, ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮಕ್ಕಳ ಸುರಕ್ಷತೆ ಹಾಗೂ ಉತ್ತಮ ಮೌಲ್ಯಗಳ ಕುರಿತು ಡಾ.ಮಾನಸಾ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತ ಆಕರ್ಷಣೆಗಳಿಗೆ ಒಳಗಾಗಬಾರದು.

ಹೆಣ್ಣುಮಕ್ಕಳನ್ನು ಯಾರಾದರೂ ಕೆಟ್ಟ ದೃಷ್ಟಿಯಿಂದ ಮುಟ್ಟಲು ಪ್ರಯತ್ನಿಸಿದರೆ, ಕೂಡಲೇ ಪಾಲಕರಿಗೆ, ಶಿಕ್ಷಕರಿಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ತಿಳಿಸಬೇಕು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದರೆ, ಹಿರಿಯರಿಂದ ಸಹಾಯವಾಣಿಗೆ ಕರೆ ಮಾಡಿಸಿ ತಡೆಯಬೇಕು. ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಆರೋಗ್ಯಕರ ಚಟುವಟಿಕೆಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಾಲಾ ಮುಖ್ಯಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ, ಶಿಕ್ಷಕ ಬಿ.ಎನ್​.ಶ್ರೀನಿವಾಸ ಹಾಗೂ ಎ.ನಾರಾಯಣಸ್ವಾಮಿ ಇದ್ದರು.