ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಸಾಗಿದ ಶಿಕ್ಷಕರು
ಚಿಕ್ಕಬಳ್ಳಾಪುರ: ಪ್ರಾಥಮಿಕ ಹಂತದಿಂದಲೇ ಮಕ್ಕಳ ಬೌದ್ಧಿಕ ಬಲವರ್ಧನೆಯಲ್ಲಿ ಸಹಕಾರಿಯಾಗಿರುವ ಬುನಾದಿ ಆಧಾರಿತ ಕಲಿಕಾ ಹಬ್ಬವನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಸಹಭಾಗಿತ್ವದೊಂದಿಗೆ ಶಿಕ್ಷಣ ಇಲಾಖೆಯು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ವಿಶೇಷ ಈ ಕಾರ್ಯಕ್ರಮದಡಿ ಕನ್ನಡ ಭಾಷೆ ಹಾಗೂ ಗಣಿತ ಬುನಾದಿ ಆಧಾರಿತ ಕಲಿಕಾ ಸಾಮರ್ಥ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಮಕ್ಕಳೊಂದಿಗೆ ಪಾಲಕರು ಸಹ ಭಾಗವಹಿಸಲಿದ್ದು ಇದು ಪರಸ್ಪರ ಉತ್ಸಾಹ, ಕ್ರಿಯಾಶೀಲತೆ, ಸಾಮಾಜಿಕ ಪರಿಸರದಲ್ಲಿ ಉತ್ತಮ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಎಸ್.ಗೊಲ್ಲಹಳ್ಳಿಯಲ್ಲಿ ಕೈಗೊಂಡಿದ್ದ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಚಾಲನೆ ನೀಡಿದರು. ಮಕ್ಕಳು ಹಾಗೂ ಶಿಕ್ಷಕರು ಊರಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ತಂಡದೊಂದಿಗೆ ಕಲಿಕಾ ಹಬ್ಬದ ಘೋಷವಾಕ್ಯಗಳೊಂದಿಗೆ ಮೆರವಣಿಗೆ ಹೊರಟರು. ಗಟ್ಟಿ ಓದು, ಕಥೆ ಹೇಳುವುದು, ಸ್ಮರಣೆ ಪರೀಕ್ಷೆ, ರಸಪ್ರಶ್ನೆ, ಆರೋಗ್ಯ ಮತ್ತು ಪೌಷ್ಠಿಕಾಂಶ ವಲಯ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ವಿಜೇತರಾದ ಮಕ್ಕಳು, ಪಾಲಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ, ಡಯಟ್ ಹಿರಿಯ ಉಪನ್ಯಾಸಕಿ ಲಕ್ಷ್ಮಮ್ಮ, ಅಕ್ಷರ ದಾಸೋಹ ನಿರ್ದೇಶಕಿ ಲಕ್ಷ್ಮೀ ದೇವಮ್ಮ, ಕ್ಷೇತ್ರ ಸಮನ್ವಯ ಅಧಿಕಾರಿ ಅರುಣ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಮಂಜುನಾಥ್ ಮತ್ತಿತರರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.