ಕಾರ್ಯಕ್ರಮದಲ್ಲಿ ಗದ್ದಲದ ದೃಶ್ಯ 
ಚಿಕ್ಕಬಳ್ಳಾಪುರ

ಕೆಂಪೇಗೌಡ ಜಯಂತಿಯಲ್ಲಿ ಗದ್ದಲ, ಪ್ರದೀಪ್ ಈಶ್ವರ್ ವಿರುದ್ಧ ಧಿಕ್ಕಾರ

ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಗೋ ಬ್ಯಾಕ್ ಗೋ ಬ್ಯಾಕ್ ಪ್ರದೀಪ್ ಈಶ್ವರ್, ಗೋ ಬ್ಯಾಕ್ ಹುಚ್ಚ ಅಂತಾ ಕೂಗಲಾಗಿದೆ. ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿರುವ ಶಾಸಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ. ಕೊನೆಗೆ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥಸ್ವಾಮೀಜಿ, ಜಿಲ್ಲಾಧಿಕಾರಿ ಜಿ.ಪ್ರಭು ಮಧ್ಯೆ ಪ್ರವೇಶಿಸಿ ಜನರನ್ನು ಸಮಾಧಾನಪಡಿಸಿದರು.
ಜಿಲ್ಲಾಡಳಿತ, ಜಿ.ಪಂ, ಒಕ್ಕಲಿಗರ ಸಂಘದ ವತಿಯಿಂದ ಚಿಕ್ಕಬಳ್ಳಾಪುರದಲ್ಲಿನ ಕನ್ನಡ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿನ ಕೆಲವರು ಧಿಕ್ಕಾರಗಳನ್ನು ಕೂಗಿದ್ದಾರೆ.
ಕುಮಾರಸ್ವಾಮಿಯ ಪಂಚೆ, ವಾಚ್, ಜಮೀನು ಸೇರಿದಂತೆ ವಿವಿಧ ವಿಚಾರಗಳಲ್ಲಿ ವ್ಯಂಗ್ಯವಾಡಿರುವ ಶಾಸಕರು ಕ್ಷಮೆಯಾಚಿಸಬೇಕು. ಕಾರ್ಯಕ್ರಮದಿಂದ ಹೊರ ಹೋಗಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳದಲ್ಲಿದ್ದ ಗಣ್ಯರು ಆಕ್ರೋಶಗೊಂಡವರನ್ನು ಸಮಾಧಾನಪಡಿಸಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಗದ್ದಲ ಎಬ್ಬಿಸುವುದು ಸರಿಯಲ್ಲ. ಕೆಂಪೇಗೌಡ ಜಯಂತಿ ಕೆಟ್ಟ ಹೆಸರು ತರುವುದು ಬೇಡ ಎಂಬುದಾಗಿ ಸಲಹೆ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು.