ಬಾಳೆಹೊನ್ನೂರು ಸಮೀಪದ ಕೋಣೆಮನೆಯ ಶೇಖರ ಪೂಜಾರಿ ಮನೆಯಂಗಳದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಣೆಯ ಕನ್ನಿ ಸ್ವಾಮಿ ಪೂಜಾ ಕಾರ್ಯಕ್ರಮ ನಡೆಯಿತು. ಸಂದೀಪ್, ಮದನ್, ಪೊನ್ನಯ್ಯ, ನಟರಾಜ್, ಮನು ಮತ್ತಿತರರಿದ್ದರು. 
ಚಿಕ್ಕಬಳ್ಳಾಪುರ

ಕನ್ನಿ ಸ್ವಾಮಿಗಳಿಗೆ ಗುರುಸ್ವಾಮಿಗಳ ಮಾರ್ಗದರ್ಶನ ಅಗತ್ಯ

ಬಾಳೆಹೊನ್ನೂರು: ಮೊದಲ ಬಾರಿಗೆ ಅಯ್ಯಪ್ಪ ಮಾಲಾಧಾರಣೆ ಮಾಡುವ ಕನ್ನಿ ಸ್ವಾಮಿಗಳಿಗೆ ಗುರುಸ್ವಾಮಿಗಳ ಮಾರ್ಗದರ್ಶನ ಅಗತ್ಯವಾಗಿ ಬೇಕಿದೆ ಎಂದು ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ಹೇಳಿದರು.
ಕೋಣೆಮನೆಯ ಶೇಖರ್ ಪೂಜಾರಿ ಮನೆಯಂಗಳದಲ್ಲಿ ಶನಿವಾರ ಕನ್ನಿ ಸ್ವಾಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಿ ಸ್ವಾಮಿ ಪೂಜಾ ಎಂದರೆ ಮೊದಲ ಬಾರಿಗೆ ಅಯ್ಯಪ್ಪ ವ್ರತವನ್ನು ಕೈಗೊಂಡಿರುವ ಮಾಲಾಧಾರಿಯ ಯಶಸ್ವಿ ವ್ರತಾಚರಣೆ ಮತ್ತು ಯಾತ್ರೆ ಸುಗಮವಾಗಿ ನಡೆದು ಮಾಲಾಧಾರಣೆ ಮಾಡಿರುವ ಭಕ್ತ ಮತ್ತು ಆತನ ಕುಟುಂಬಕ್ಕೆ ಅಯ್ಯಪ್ಪನ ಕೃಪಾಕಟಾಕ್ಷ ಲಭಿಸಲಿ ಎಂದು ನಡೆಸುವ ಪೂಜೆಯಾಗಿದೆ ಎಂದರು. 
ಕನ್ನಿ ಎಂದರೆ ಮೊದಲ ಅಥವಾ ಕುಮಾರ ಎಂಬ ಅರ್ಥ ಬರುತ್ತದೆ. ಈ ಪೂಜೆಗೆ ಅಯ್ಯಪ್ಪಸ್ವಾಮಿಯ ಇತಿಹಾಸದಲ್ಲಿ ಬಹಳ ಮಹತ್ವವಿದೆ. ಕನ್ನಿಸ್ವಾಮಿ ಪೂಜೆಯಲ್ಲಿ ಅಯ್ಯಪ್ಪನ ಭಾವಚಿತ್ರದ ಮುಂದೆ ಕಳಸ ಪ್ರತಿಷ್ಠಾಪಿಸಿ ಭಸ್ಮಾರತಿ, 18 ಮೆಟ್ಟಿಲುಗಳ ಧ್ಯೋತಕವಾಗಿ ಪಡಿಪೂಜೆ ಮಾಡಿ ಪೂಜಿಸಿ ಅಯ್ಯಪ್ಪನ ಆಹ್ವಾನೆ ಮಾಡಲಾಗುತ್ತದೆ. ಅಯ್ಯಪ್ಪನಿಗೆ ಇಷ್ಟವಾದ ಪಂಚಾಮೃತ, ಹಾಲು ಹಣ್ಣುಗಳ ನೈವೇದ್ಯವನ್ನು ಮಾಡಿ ಮಾಲಾಧಾರಿಗಳಿಗೆ ಮತ್ತು ಕುಟುಂಬಸ್ಥರಿಗೆ ಮನೆಯಲ್ಲಿ ಅನ್ನದಾನ ಮಾಡುವುದೇ ಕನ್ನಿ ಸ್ವಾಮಿ ಪೂಜೆಯ ವಿಶೇಷವಾಗಿದೆ ಎಂದರು.
ಅಯ್ಯಪ್ಪ ಸಮಿತಿ ಉಪಾಧ್ಯಕ್ಷ ರವಿ ಸ್ವಾಮಿ ಮಾತನಾಡಿ, ಜಾತಿ, ಮತ ಮರೆತು ಎಲ್ಲರೂ ಒಂದಾಗಿ ಬಾಳಲು ಅಯ್ಯಪ್ಪ ವ್ರತಾಚರಣೆ ಭಗವಂತ ಮನುಷ್ಯನಿಗೆ ನೀಡಿದ ವರವಾಗಿದೆ. ಇತ್ತೀಚೆಗೆ ವ್ರತಾಚರಣೆ ಬಿಗಿ ತಪ್ಪುತ್ತಿದ್ದು ಕೇವಲ ಒಂದೆರಡು ದಿನ ಮಾಲೆ ಧರಿಸಿ ಶಬರಿಮಲೆ ದರ್ಶನ ಪಡೆಯುತ್ತಿರುವುದು ಬೇಸರದ ವಿಚಾರ. ಈ ಬೆಳವಣಿಗೆ ಹೆಚ್ಚಾಗಿ ನಗರ ಭಾಗದಲ್ಲಿ ನಡೆಯುತ್ತಿದ್ದು ಈ ಬಗ್ಗೆ ಮಾಲಾಧಾರಣೆ ಮಾಡುವ ಗುರುಸ್ವಾಮಿಗಳು ಮಾಲಾಧಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ ಎಂದರು. 
ಸಮಿತಿ ಖಜಾಂಚಿ ಬಿ.ಜಗದೀಶ್ಚಂದ್ರ ಮಾತನಾಡಿ, ರೇಣುಕನಗರದ ಅಯ್ಯಪ್ಪ ಸೇವಾ ಸಮಿತಿ ಪ್ರಸ್ತುತ ಅನ್ನದಾನ, ಪೂಜೆ, ವ್ರತಾಚರಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮಾತ್ರ ನೆರವೇರಿಸಿಕೊಂಡು ಬರತ್ತಿದೆ. ಮುಂದಿನ ದಿನಗಳಲ್ಲಿ ಅಯ್ಯಪ್ಪಸ್ವಾಮಿಯ ಹೆಸರಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹೊಂದಿದೆ ಎಂದು ತಿಳಿಸಿದರು. 
ಈ ಬಾರಿ ಬಾಳೆಹೊನ್ನೂರು ವ್ಯಾಪ್ತಿಯ ಹಲವು ಭಾಗಗಳಲ್ಲಿ ಜ.8ವರೆಗೆ ಕನ್ನಿ ಸ್ವಾಮಿ ಪೂಜೆ ನಡೆಯಲಿದೆ. ಧರ್ಮಕ್ಕೆ ಅಂಟಿರುವ ಕೆಲವು ಪಿಡುಗುಗಳನ್ನು ನಿವಾರಣೆ ಮಾಡಲು ಅಯ್ಯಪ್ಪನ ವ್ರತಾಚರಣೆ ಸಹಾಯ ಮಾಡುತ್ತದೆ ಹಾಗೂ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ ಎಂದರು. ಕನ್ನಿ ಸ್ವಾಮಿ ಪೂಜೆ ಅಂಗವಾಗಿ ಭಜನೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಮಾಲಾಧಾರಿಗಳಾದ ಸಂದೀಪ್, ಮದನ್, ಮುರುಗೇಶ್, ಪೊನ್ನಯ್ಯ, ಮಂಜು, ನಟರಾಜ್, ಮನು ಮತ್ತಿತರರಿದ್ದರು.