ಮೃತ ಮಹಿಳೆ ಮಂಜುಳಾ 
ಚಿಕ್ಕಬಳ್ಳಾಪುರ

ಗೃಹಿಣಿ ಸಾವು, ಭೂತ ಕಾಟದ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು

ಚಿಕ್ಕಬಳ್ಳಾಪುರ: ಮಹಿಳೆಯು ನಿತ್ರಾಣದಿಂದ ಕುಸಿದು ಬಿದ್ದು ಮೃತಪಟ್ಟಿದ್ದು ಇದಕ್ಕೆ ಕುಟುಂಬಸ್ಥರು ಭೂತಚೇಷ್ಠೆಯ ಕಾಟ ಎಂಬುದಾಗಿ ಹೇಳುತ್ತಿರುವುದು ಚರ್ಚೆಗ್ರಾಸವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸೌತೇನಹಳ್ಳಿಯ ಮಂಜುಳಾ (36) ಮೃತೆ. ಈಕೆಯನ್ನು ಕಳೆದ 16 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿಯ ರಮೇಶ್ ಎಂಬುವವರು ವಿವಾಹವಾಗಿದ್ದರು. ಇತ್ತೀಚೆಗೆ ತವರಿನ ಮನೆಯ ಕುಟುಂಬದ ಸದಸ್ಯರೊಬ್ಬರ ಸಾವಿಗೆ ಹೋಗಿ ಬಂದ ಮೇಲೆ ಮಂಜುಳಾ ವಿಚಿತ್ರವಾಗಿ ಆಡುತ್ತಿದ್ದಳು. ಯಾರ್ಯಾರೋ ಬಂದು ಕಾಣಿಸುತ್ತಿದ್ದಾರೆ. ನಿದ್ದೆ ಹೋಗಲು ಬಿಡುತ್ತಿಲ್ಲ ಎಂದು ಹೇಳುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಶಿಡ್ಲಘಟ್ಟ ತಾಲೂಕಿನ ಮೇಲೂರಿಗೆ ಪತಿಯೊಂದಿಗೆ ತೆರಳಿ ಮಂತ್ರ ಸಹ ಹಾಕಿಸಿಕೊಂಡು ಬಂದಿದ್ದಳು. ಆದರೂ ಭೀತಿ ದೂರವಾಗಿರಲಿಲ್ಲ. ಇದರ ನಡುವೆ ನಿತ್ರಾಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ತೋರಿಸಿದರೂ ಸಮಸ್ಯೆ ಏನು ಅಂತಾ ಗೊತ್ತಾಗಲಿಲ್ಲ. ಭೂತದ ಕಾಟ ಎಂಬ ಮಾತಿನ ಹಿನ್ನೆಲೆಯಲ್ಲಿ ಮಂತ್ರ ಸಹ ಹಾಕಿಸಲಾಯಿತು ಎಂದು ಮೃತಳ ಪತಿ ರಮೇಶ್ ತಿಳಿಸಿದ್ದಾರೆ.
ಇನ್ನು ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆಕೆಯ ಸಾವಿನಿಂದ ಅಘಾತವಾಗಿದೆ ಎಂದು ಮಂಜುಳಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.