ಅಂಗನಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರವನ್ನು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ನೀಡಿದರು. 
ಚಿಕ್ಕಬಳ್ಳಾಪುರ

ಅಂಗನವಾಡಿ ಕೇಂದ್ರಗಳ ಉನ್ನತೀಕರಣ ಮಹತ್ವ ಪ್ರತಿಪಾದಿಸಿದ ಉನ್ನತ ಶಿಕ್ಷಣ ಸಚಿವ

ಚಿಕ್ಕಬಳ್ಳಾಪುರ: ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಿ, ಮಾಂಟೆಸೆರಿ ಹಾಗೂ ನರ್ಸರಿ ಮಾದರಿಯಲ್ಲಿ ಶಿಕ್ಷಣ ನೀಡುವ ಕೆಲಸವಾಗುತ್ತಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರವು ಮತ್ತೊಮ್ಮೆ ಪರಿಶೀಲಿಸಿ, ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ಹಾಗೂ ವಿವಿಧ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ೩ನೇ ವರ್ಷದಿಂದಲೇ ನರ್ಸರಿ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಂತದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದು ಪ್ರಾಯೋಗಿಕವಾಗಿ ಅನುಷ್ಠಾನಗೊಂಡು ಯೋಜನೆಯು ಯಶಸ್ವಿಯಾದಲ್ಲಿ ಮುಂಬರುವ ದಿನಗಳಲ್ಲಿ ಅಂಗನವಾಡಿಗಳ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಅಂಗನವಾಡಿ ಸಿಬ್ಬಂದಿ ನೇಮಕದ ಬಗ್ಗೆಯೂ ತಾತ್ಸರ ಮನೋಭಾವನೆ ಇತ್ತು. ಇದು ಕಡಿಮೆ ವಿದ್ಯಾರ್ಹತೆಯವರಿಗೆ ಸೀಮಿತ ಹಾಗೂ ಆ ಕೆಲಸವನ್ನು ನಾವೇಕೆ ಮಾಡಬೇಕೆಂಬುದಾಗಿ ಯೋಚಿಸಲಾಗುತ್ತಿತ್ತು. ಆದರೆ, ಈ ವಾತಾವರಣ ಬದಲಾಗಿದೆ. ನೇಮಕಾತಿಗೆ ಪರಸ್ಪರ ಪೈಪೋಟಿ ಹೆಚ್ಚಾಗಿದ್ದು
ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಹುದ್ದೆಗಳಿಗೆ ಬಹಳ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಬರುವ ಕೂಲಿಕಾರರು ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ದಾಖಲಾಗುತ್ತಾರೆ. ಗರ್ಭಿಣಿಯರಿಗೂ ಸರ್ಕಾರಿ ಸವಲತ್ತು ನೆರವು ನೀಡಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಜವಾಬ್ದಾರಿ ನಿರ್ವಹಿಸಬೇಕು. ಬಡವರ ಮಕ್ಕಳು ಹಾಗೂ ಫಲಾನುಭವಿಗಳ ಬೆಳವಣಿಗೆಗೆ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿ.ಪಂ.ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್ ಮತ್ತಿತರರು ಇದ್ದರು.