ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನ 
ಚಿಕ್ಕಬಳ್ಳಾಪುರ

ಮೂವರು ಮಹಿಳಾ ಕಾರ್ಮಿಕರನ್ನು ಬಲಿ ಪಡೆದ ಸರಕು ಸಾಗಣೆ ವಾಹನ

ಶಿಡ್ಲಘಟ್ಟ: ಇಲ್ಲಿನ ಹೊಸಹಳ್ಳಿ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ ೨೩೪ ರಲ್ಲಿ ಓಮಿನಿ ಕಾರು ಹಾಗೂ ಈಚರ್ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (೩೦), ರತ್ನಮ್ಮ (೪೫) ಹಾಗೂ ಮುನಿಚೆನ್ನಮ್ಮ (೪೦) ಮೃತರು.

ಶಿಡ್ಲಘಟ್ಟ ಹಾಗು ಚಿಂತಾಮಣಿ ಗಡಿಯಲ್ಲಿರುವ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ, ರತ್ನಮ್ಮ, ಹಾಗೂ ಮುನಿಚೆನ್ನಮ್ಮ ಸೇರಿದಂತೆ ಗ್ರಾಮದ ಮಹಿಳೆಯರು ಹೂವಿನ ತೋಟದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದರಂತೆ ಮಾರುತಿ ಓಮನಿ ಕಾರಿನಲ್ಲಿ ಹುಜಗೂರು ಗ್ರಾಮದ ಹೂವು ತೋಟವೊಂದರಲ್ಲಿ ಹೂವು ಕೀಳಲು ಹೋಗುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಇದರಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದು ಉಳಿದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹೂ ಭೇಟಿ ನೀಡಿ ಪರಿಶೀಲಿಸಿದ್ದು ಶಿಡ್ಲಘಟ್ಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.