ಶಿಡ್ಲಘಟ್ಟ ತಾಲೂಕಿನ ಈ.ತಿಮ್ಮಸಂದ್ರ ರೈತ ಉತ್ಪಾದಕರ ಕಂಪನಿಯ ಮಹಾಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಪಿಡಿಒ ರವೀಂದ್ರ, ಕಾರ್ಯದರ್ಶಿ ಧನುಜಾ ನಾಯ್ಕ್​, ಮುಖಂಡ ಶೆಮೀವುಲ್ಲಾ, ಕದಿರಪ್ಪ, ಕಂಪನಿ ನಿರ್ದೇಶಕ ಚಂದ್ರಶೇಖರರೆಡ್ಡಿ ಇದ್ದರು. Give up the use of chemicals and focus on natural farming.
ಚಿಕ್ಕಬಳ್ಳಾಪುರ

ರಾಸಾಯನಿಕ ಬಳಕೆ ಬಿಡಿ, ನೈಸರ್ಗಿಕ ಕೃಷಿಗೆ ಒತ್ತು ನೀಡಿ

ಫೌಂಡೇಷನ್​ ಫಾರ್​ ಇಕಾಲಾಜಿಕಲ್​ ಸೆಕ್ಯೂರಿಟಿ ಸಂಸ್ಥೆ ತಾಲೂಕು ಸಂಯೋಜಕ ಎನ್​.ರಮೇಶ್​ ಕರೆ

ಶಿಡ್ಲಘಟ್ಟ: ಅನಿಶ್ಚಿತ ಮಳೆ, ಅಂತರ್ಜಲ ಕುಸಿತ, ಹೆಚ್ಚುತ್ತಿರುವ ಕೃಷಿ ಬಂಡವಾಳ, ಬೆಳೆ ನಷ್ಟ ಹಾಗೂ ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಬೆಲೆ ಸಿಗದಿರುವುದು ರೈತನನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಫೌಂಡೇಷನ್​ ಫಾರ್​ ಇಕಾಲಾಜಿಕಲ್​ ಸೆಕ್ಯೂರಿಟಿ ಸಂಸ್ಥೆ ತಾಲೂಕು ಸಂಯೋಜಕ ಎನ್​.ರಮೇಶ್​ ತಿಳಿಸಿದರು.

ತಾಲೂಕಿನ ಈ.ತಿಮ್ಮಸಂದ್ರ ರೈತ ಉತ್ಪಾದಕರ ಕಂಪನಿಯ 2025-&26ನೇ ಸಾಲಿನ ಸಭೆಯಲ್ಲಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ರಾಜಕಾಲುವೆ, ಪೋಷಕ ಕಾಲುವೆ ಸೇರಿ ಸಾಮುದಾಯಿಕ ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸಿ, ಮಣ್ಣಿನ ಆರೋಗ್ಯ ಕಾಪಾಡಬೇಕು.

ಸಾವಯವ ಕೃಷಿ ಪದ್ಧತಿ ಉತ್ತೇಜಿಸಿ, ವೆಚ್ಚ ಕಡಿಮೆ ಮಾಡಿ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ 2023ರಲ್ಲಿ ಎಫ್​ಇಎಸ್​ ಸಂಸ್ಥೆಯ ಸಹಕಾರದೊಂದಿಗೆ ಸಮುದಾಯದ ನೇತೃತ್ವದಲ್ಲಿ ರೈತ ಉತ್ಪಾದಕರ ಕಂಪನಿ ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಕಂಪನಿಯು ರೈತರ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಕೃಷಿ ಪರಿಕರ ಹಾಗೂ ಬಿತ್ತನೆ ಬೀಜ ಕೈಗೆಟುಕುವ ದರದಲ್ಲಿ ಒದಗಿಸುವುದರ ಜತೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಲಾಭಕ್ಕಿಂತ ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಬೆಳವಣಿಗೆಗೆ ಎಲ್ಲ ನಿರ್ದೇಶಕರು, ಷೇರುದಾರರು ಹಾಗೂ ಸಮುದಾಯದವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಂಪನಿ ನಿರ್ದೇಶಕ ಟಿ.ಪಿ.ಬೈರಾರೆಡ್ಡಿ ಮಾತನಾಡಿ, ಕಂಪನಿಯಿಂದ ಕೃಷಿ ಇಲಾಖೆ ಅಕಾಧಿರಿಗಳನ್ನು ಆಹ್ವಾನಿಸಿ ರೈತರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. 500 ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆ ಹಾಗೂ 500 ರೈತರಿಗೆ ಕೃಷಿ ವಿಮೆ ಮಾಡಿಸಲು ನೆರವು ನೀಡಲಾಗಿದೆ. ಪ್ರಸ್ತುತ 60 ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವುದು ಕಂಪನಿಯ ಪ್ರಮುಖ ಸಾಧನೆಯಾಗಿದೆ ಎಂದರು.

ಎಸ್​ಎಂ ಸೆಹಗಲ್​ ಫೌಂಡೇಷನ್​ನ ಹಿರಿಯ ಅಧಿಕಾರಿ ಇಮ್ರಾನ್​ ಖಾನ್​ ಮಾತನಾಡಿ, ಫೌಂಡೇಶನ್​ನಿಂದ ರೈತರಿಗೆ ವಿವಿಧ ಕೃಷಿ ಉತ್ತೇಜನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಸ್ತುತ 80 ರೈತರಿಗೆ ಪ್ಯಾಕೇಜ್​ ಆಫ್​ ಪ್ರಾಕ್ಟೀಸಸ್​ಕಿಟ್​ ವಿತರಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಅಂಜಿನಮ್ಮ, ವೆಂಕಟರವಣಪ್ಪ, ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ಕೃಷ್ಣಪ್ಪ, ಶ್ಯಾಮಮೂರ್ತಿ, ರಮೇಶ್​ ಬಾಬು, ನಾಗರಾಜು, ನರಸಿಂಹಪ್ಪ, ಗೋಪಿ, ಕಾಂತರಾಜು, ನಂಜಮ್ಮ, ಪ್ರಸಾದ್​, ಮಂಜುನಾಥ್​, ಮುನಿಕೃಷ್ಣ, ವಿನೋದ್​, ನಿರ್ಮಲಾ, ಮುನಿವೆಂಕಟರೆಡ್ಡಿ ಇದ್ದರು.