ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ರಾಮಾಂಜಿ ತೋಟಕ್ಕೆ ಸಂಸದ ಡಾ ಕೆ.ಸುಧಾಕರ್ ಭೇಟಿ ನೀಡಿ, ರೈತರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
ಚಿಕ್ಕಬಳ್ಳಾಪುರ: ಧನುರ್ಮಾಸದ ಅವಧಿಯಲ್ಲಿ ಮದುವೆ ಸಮಾರಂಭಗಳು, ವಿಶೇಷ ಪೂಜಾ ಕಾರ್ಯಕ್ರಮಗಳು, ಉತ್ಸವಗಳು ನಡೆಯದಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೇ ಮಾರುಕಟ್ಟೆಯಲ್ಲಿ ಶೇ.60 ರಷ್ಟು ಹೂವಿನ ದರವು ಕುಸಿತ ಕಂಡಿದೆ.
ಕಳೆದ 15 ದಿನಗಳಿಂದಲೂ ಹೂವು ಬೆಳೆಗಾರರಿಗೆ ನಿರೀಕ್ಷೆಗೆ ಅನುಗುಣವಾಗಿ ಲಾಭ ಸಿಗುತ್ತಿಲ್ಲ. ಮುಂಬರುವ ಮಕರ ಸಂಕ್ರಾಂತಿ ಹಬ್ಬಕ್ಕೆ ದರ ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾರ್ತಿಕ ಮಾಸದಲ್ಲಿ ಕೆ.ಜಿ.ಹೂವಿಗೆ (ಬಗೆಬಗೆಯ ಗುಲಾಬಿ ಹೂವುಗಳು, ಚೆಂಡು ಹೂವು, ಸೇವಂತಿಗೆ) ಮಾರುಕಟ್ಟೆಯಲ್ಲಿ 70 ರೂಗಳಿಂದ ರಿಂದ ಗರಿಷ್ಠ 180 ರೂ ವರೆಗೂ ದರ ಇತ್ತು. ಆದರೆ, ಈಗ ಕನಿಷ್ಠ ದರವು 20 ರೂಗಳಿಂದ ಗರಿಷ್ಠ 80 ರೂಗಳಿಗೆ ಕುಸಿದಿದೆ ಎಂದು ಹೂವು ಬೆಳೆಗಾರರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಪೂರೈಕೆಯಾಗುತ್ತಿವೆ. ಆದರೆ, ಇದಕ್ಕೆ ಅನುಗುಣವಾಗಿ ಬೇಡಿಕೆ ಇಲ್ಲ. ಧನುರ್ಮಾಸದಲ್ಲಿ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಧಾರ್ಮಿಕ ಉತ್ಸವಗಳು ತುಂಬಾ ಕಡಿಮೆಯಾಗಿವೆ. ಇದಕ್ಕೆ ಕರ್ನಾಟಕ ಮಾತ್ರವಲ್ಲದೇ ನೆರೆ ಹೊರೆ ರಾಜ್ಯಗಳ ವರ್ತಕರು ನಷ್ಟ ಲಾಭದ ಲೆಕ್ಕಾಚಾರದಲ್ಲಿ ಕಡಿಮೆ ಖರೀದಿಸುತ್ತಿದ್ದಾರೆ. ವಿವಿಧ ಸಂಸ್ಥೆಗಳಿಂದ ಬುಕ್ಕಿಂಗ್ ಸಹ ಇಲ್ಲ.