ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಕೈಗೊಂಡಿದ್ದ ವಿಚಾರ ಸಂಕಿರಣ.
ಚಿಕ್ಕಬಳ್ಳಾಪುರ:ತಾಳಗುಂದದಲ್ಲಿ ಸಿಕ್ಕಿದ ಸಿಂಹ ಕಟಾಂಜನವೇ ಕನ್ನಡದ ಮೊದಲ ಶಾಸನ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಹಲ್ಮಡಿ ಶಾಸನಕ್ಕಿಂತಲೂ 70 ವರ್ಷ ಹಳೇಯದು. ಇದರಲ್ಲಿನ 17 ಸಾಲುಗಳಲ್ಲಿ 7 ಸಾಲು ಕನ್ನಡದಲ್ಲಿಯೇ ಇವೆ ಎಂದು ಸಂಶೋಧಕ ಡಾ. ಲಕ್ಷ್ಮೀಶ ಹೆಗ್ಡೆ ಸೋಂದಾ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಭಾರತೀಯ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನವು
ಕರ್ನಾಟಕದ ಆರಂಭಿಕ ಇತಿಹಾಸದ ಬಗೆಗಿನ ಮೂಲ ವಿಚಾರಗಳ ನಿರೂಪಣೆ ಹಾಗೂ ಐತಿಹಾಸಿಕ ವಿಚಾರಗಳ ಮರುಪರಿಶೀಲನೆಯ ಉದ್ದೇಶದೊಂದಿಗೆ ಕೈಗೊಂಡಿದ್ದ ಕದಂಬರು ಮತ್ತು ಕರ್ನಾಟಕದ ನಿರ್ಮಾಣದ ಕುರಿತ ವಿಚಾರ ಸಂಕಿರಣದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದರು.
ಕದಂಬ ರಾಜ ಮಯೂರ ವರ್ಮನ ಸಾಹಸದ ಬಗ್ಗೆಯೇ ಶಂಕೆ ವ್ಯಕ್ತಪಡಿಸುವಂತಹುದಾಗುತ್ತಿದೆ. ಇದು ಸರಿಯಲ್ಲ. ಒಂದು ವೇಳೆ ಈ ಧೋರಣೆಗೆ ಕಟ್ಟು ಬಿದ್ದರೆ ಉಳಿದ ಸ್ರಾಮಾಜ್ಯಗಳನ್ನೂ ಸಹ ಅನುಮಾನ ದೃಷ್ಟಿಯಲ್ಲಿಯೇ ಕಾಣಬೇಕಾಗುತ್ತದೆ ಎಂದರು.
ಕಂಚಿಗೆ ಮಯೂರ ನಿಖಿಲ ಪ್ರವಚನದ ಅಧ್ಯಯನಕ್ಕೆ ಹೋಗಿ ಬಂದ ಎಂಬುದಾಗಿ ಶಾಸನದಲ್ಲಿ ಉಲ್ಲೇಖವಾಗಿದ್ದು ಇದರ ಅರ್ಥ ಪರಿಪೂರ್ಣ ಕಲಿಕಾಭ್ಯಾಸ ಮಾಡಿರುವುದಾಗಿದೆ. ಇನ್ನು 2014 ರವರೆಗೆ ಪ್ರಣವೇಶ್ವರ ದೇವಸ್ಥಾನವೇ ಮೂಲ ಸ್ಥಳ ಎಂದೇ ಭಾವಿಸಲಾಗಿತ್ತು. ಆದರೆ, ನಿರಂತರ ಉತ್ಖನದಿಂದ ಆ ದೇಗುಲದ ಕೆಳಗೆ ಪೂರ್ತಿ ಇಟ್ಟಿಗೆಯಲ್ಲಿ ನಿರ್ಮಿಸಿದ ಮತ್ತೊಂದು ದೇವಾಲಯ ಪತ್ತೆಯಾಗಿದೆ. ಇಂತಹ ಹಲವು ವಿಚಾರಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ರಾಜಕೀಯ ಇತಿಹಾಸಕ್ಕಿಂತಲೂ ಆಧ್ಯಾತ್ಮಿಕ, ಸಾಂಸ್ಕೃತಿಕತೆಯ ಸಂಶೋಧನೆಗೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಿಂಹ ಕಟಾಂಜನ ಶಾಸನವು ಹಲ್ಮಿಡಿ ಶಾಸನಕ್ಕಿಂತಲೂ ಹಳೇಯದು ಎನ್ನುವುದು ತಿಳಿದು ಬಂದಿದ್ದು ಇದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈಗಾಗಲೇ ಶಿವಮೊಗ್ಗದ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅತ್ಯಂತ ಹಳೇಯದು ಎಂಬ ಅಂಶವನ್ನು ಸೇರಿ, ಬೋಧಿಸಲಾಗುತ್ತಿದೆ ಎಂದರು.
ವಿಚಾರ ಸಂಕಿರಣದಲ್ಲಿ ಹಲಸಿ, ಬನವಾಸಿ, ತಾಳಗುಂದ ಮತ್ತು ಗುಡ್ನಾಪುರದಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನಗಳು, ಕದಂಬರ ಶಿಲಾಶಾಸನ ಮತ್ತು ನಾಣ್ಯಶಾಸ್ತ್ರೀಯ ಸಂಪ್ರದಾಯಗಳು, ಕನ್ನಡ ಲಿಪಿಯ ವಿಕಸನ ಮತ್ತು ಕದಂಬ ರಾಜಪ್ರಭುತ್ವದ ಸೈದ್ಧಾಂತಿಕ ಅಡಿಪಾಯಗಳ ಉಪನ್ಯಾಸ ನೀಡಲಾಯಿತು.
ಭಾರತದಾದ್ಯಂತದ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿದ್ವಾಂಸರು ಪಶ್ಚಿಮ ಘಟ್ಟಗಳಲ್ಲಿನ ಆರಂಭಿಕ ನಗರೀಕರಣ, ಅಂತರಪ್ರಾದೇಶಿಕ ರಾಜತಾಂತ್ರಿಕ ಜಾಲಗಳು, ಕದಂಬ ಪ್ರಭಾವದಿಂದ ಕದಂಬ ಅಧಿಕಾರದ ಅವಧಿಗಳವರೆಗಿನ ನಾಣ್ಯ ಸಂಪ್ರದಾಯಗಳು ಮತ್ತು ಹಲ್ಮಿಡಿ ದಾಖಲೆ ಸೇರಿದಂತೆ ಆರಂಭಿಕ ಕನ್ನಡ ಶಾಸನಗಳ ಇತಿಹಾಸ ಶಾಸ್ತ್ರೀಯ ಮರುಮೌಲ್ಯಮಾಪನಗಳ ಪ್ರಬಂಧಗಳನ್ನು ಮಂಡಿಸಲಾಯಿತು.