ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಹೋಬಳಿಯ ೧೩ ಹಳ್ಳಿಗಳ ವ್ಯಾಪ್ತಿಯಲ್ಲಿನ ಕೈಗಾರಿಕಾಭಿವೃದ್ಧಿಗೆ ಭೂಸ್ವಾಧೀನ ಹಾಗೂ ಪರಿಹಾರ ವಿಚಾರವಾಗಿ ಚರ್ಚಿಸಲು ಸಭೆಗೆ ಕರೆದು, ರೈತರನ್ನು ಬಂಧಿಸಿರುವ ಆರೋಪ ಕೇಳಿ ಬಂದಿದೆ.
ನಿರಂತರ ಅನಿರ್ದಿಷ್ಟಾವಧಿ ಹೋರಾಟದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿನ ಕೆಐಡಿಬಿ ಭವನದಲ್ಲಿ ಬುಧವಾರ ಭೂ ಸ್ವಾಧೀನ, ಪರಿಹಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ರ‍್ಚಿಸಲು ಸಭೆಯನ್ನು ಕರೆಯಲಾಗಿತ್ತು. ಇದಕ್ಕೆ ರೈತರು, ಹೋರಾಟಗಾರರನ್ನು ಆಹ್ವಾನಿಸಲಾಗಿತ್ತು. ಇದನ್ನು ನಂಬಿ ಬಂದವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಸಭೆ ಮುಗಿಯುವವರೆಗೂ ಬಸ್ಸಿನಲ್ಲಿ ಬೇರೆ ಬೇರೆ ಸುತ್ತಾಡಿಸಿ, ಕೊನೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ರೈತರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಧೋರಣೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಸ್ತೆ ತಡೆ ನಡೆಸಿದೆ. ಮಾನವ ಸರಪಳಿ ನಿರ್ಮಿಸಿ ರಸ್ತೆಯ ಮಧ್ಯೆ ಧರಣಿ ಕುಳಿತ ರೈತರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ವಾಹನ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ಆಹ್ವಾನಿಸಿದ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಬದಲಿಗೆ ವಾಹನದಲ್ಲಿ ಸುತ್ತಾಡಿಸಿ, ಕಾಲಹರಣ ಮಾಡಿದ್ದಾರೆ ಎಂದು ರೈತ ಸಂಘದ ಕರ‍್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಕಿಡಿಕಾರಿದ್ದಾರೆ.