ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿಗಳನ್ನು ಕೊರೆಸುವ ಮೂಲವಾದ ಅಮ್ಮನಕೆರೆಯಲ್ಲಿ ನೀರಿಲ್ಲದಿರುವುದು. 
ಚಿಕ್ಕಬಳ್ಳಾಪುರ

ಹಣ ಕೊಟ್ಟರೂ ಸಿಗುತಿಲ್ಲ ನೀರು

ಪ್ರಮುಖ ಮುಖ್ಯಾಂಶಗಳು

  • ಹಣ ಕೊಟ್ಟರೂ ಸಿಗುತಿಲ್ಲ ನೀರು
ಹಣ ಕೊಟ್ಟರೂ ಸಿಗುತಿಲ್ಲ ನೀರು
ಶಿಡ್ಲಘಟ್ಟ ತಾಲೂಕಿನ 33 ಗ್ರಾಮಗಳಲ್ಲಿ ಜಲ ಸಮಸ್ಯೆ
* ನೂಲು ಬಿಚ್ಚಾಣಿಕೆಗೂ ಕಾಡಿದ ಜಲದ ಬರ
ಶಿಡ್ಲಘಟ್ಟ: ಸಿಲ್ಕ್​ ಸಿಟಿ ಎಂದೇ ಪ್ರಖ್ಯಾತಿಯಾಗಿರುವ ಶಿಡ್ಲಘಟ್ಟದಲ್ಲಿ ಸಾವಿರಾರು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿದ್ದು, ಪ್ರತಿ ನಿತ್ಯ ಲಕ್ಷಾಂತರ ಲೀಟರ್​ ನೀರು ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಬಳಕೆಯಾಗುತ್ತದೆ. ಆದರೆ, ಈ ಬಾರಿಯ ಬೇಸಿಗೆ ಕುಡಿಯುವ ನೀರಿನ ಬವಣೆ ಜತೆಗೆ ರೇಷ್ಮೆ ಉದ್ಯಮಕ್ಕೂ ಪೆಟ್ಟು ಕೊಟ್ಟಿದೆ.
ಯಾವುದೇ ನದಿ, ನಾಲೆಗಳಿಲ್ಲದ, ಕುಡಿಯಲು ಮತ್ತು ಕೃಷಿ ನೀರಿಗಾಗಿ ಕೊಳವೆ ಬಾವಿಗಳನ್ನು ಆಶ್ರಯಿಸಿರುವ ಶಿಡ್ಲಘಟ್ಟ ನಗರದಲ್ಲಿ ಕೃಷಿ, ಕುಡಿಯುವ ನೀರಿನ ಕೊರತೆ ಬೆಂಬಿಡದೆ ಕಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.
ಸಕಾಲದಲ್ಲಿ ಮಳೆಯಾಗದಿರುವುದು ಹಾಗೂ ಅತಿಯಾದ ಬಿಸಿಲಿಗೆ ಕೆರೆ, ಕುಂಟೆಗಳು ಬತ್ತಿ ಭೂಮಿ ಬಿರುಕು ಬಿಟ್ಟಿದೆ. ಇಂತಹದ್ದರಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಜನರಿಗೆ ನೀರು ಪೂರೈಸಬೇಕು. ಇಲ್ಲವೇ ಟ್ಯಾಂಕರ್​ ಮೂಲಕ ನೀರು ಪೂರೈಸುವುದಷ್ಟೆ ತಾಲೂಕು ಆಡಳಿತ, ಸ್ಥಳಿಯ ಸಂಸ್ಥೆಗಳ ಮುಂದಿರುವ ಪರಿಹಾರವಾಗಿದೆ.
ರೇಷ್ಮೆ ತಯಾರಿಗೂ ತೊಡಕು: ನಗರದಲ್ಲಿ 5000ಕ್ಕೂ ಹೆಚ್ಚು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿದ್ದು, ನೂಲು ಬಿಚ್ಚಾಣಿಕೆಗೆ ಹೆಚ್ಚಿನ ನೀರಿನ ಅಗತ್ಯವಿದೆ. ನಗರಸಭೆಯಿಂದ ಪೂರೈಕೆಯಾಗುವ ನೀರು ಸಾಕಾಗದೆ ನಗರದ ಬಹುತೇಕ ರೀಲರುಗಳೂ ಹಣ ಕೊಟ್ಟು ವರ್ಷದ 365 ದಿನಗಳೂ ನೀರನ್ನು ಖರೀದಿಸುವುದನ್ನು ಕಾಣಬಹುದು. ಬೇಸಿಗೆಯಲ್ಲಿ ಅದರ ಪ್ರಮಾಣ ದುಪ್ಪಟ್ಟಾಗಲಿದೆ. ರೀಲರುಗಳು ಟ್ಯಾಂಕರ್​ ನೀರಿಗಾಗಿಯೇ ಸಾವಿರಾರು ರೂ. ಖರ್ಚು ಮಾಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣ ಕೊಟ್ಟರೂ ನೀರು ಸಿಗದ ಸ್ಥಿತಿ ನಿಮಾರ್ಣವಾಗಿದ್ದು, ರೇಷ್ಮೆ ತಯಾರಿಕೆಗೂ ತೊಂದರೆಯಾಗಿದೆ.
ಅಗತ್ಯಕ್ಕೆ ತಕ್ಕಂತೆ ಸಿಗುತ್ತಿಲ್ಲ: ಶಿಡ್ಲಘಟ್ಟ ನಗರವೊಂದರಲ್ಲೇ ಸುಮಾರು 60 ಸಾವಿರ ಜನಸಂಖ್ಯೆಯಿದೆ. ಒಳಚರಂಡಿ(ಯುಜಿಡಿ) ವ್ಯವಸ್ಥೆ ಇರುವ ನಗರಗಳಲ್ಲಿ ನಿಯಮದಂತೆ ಪ್ರತಿ ವ್ಯಕ್ತಿಗೂ ಪ್ರತಿ ದಿನ 135 ಲೀಟರ್​ ನಷ್ಟು ಕುಡಿಯುವ ಮತ್ತು ಇತರ ಬಳಕೆ ನೀರನ್ನು ಪೂರೈಕೆ ಮಾಡಬೇಕಿದೆ. ಆದರೆ, ನಗರದಲ್ಲಿ ಸದ್ಯಕ್ಕೆ 50 ಲೀಟರ್​ನಷ್ಟು ಮಾತ್ರವೇ ಪೂರೈಸಲಾಗುತ್ತಿದೆ. ಅಂದರೆ ಶೇ.30 ಮಾತ್ರ ಪೂರೈಸುತ್ತಿದ್ದು, ಶೇ. 70 ಕೊರತೆ ಕಾಡುತ್ತಿದೆ.
ನಗರದ 31 ವಾರ್ಡ್​ಗಳ ಪೈಕಿ 5 ವಾರ್ಡ್​ಗಳಿಗೆ 3 ದಿನಕ್ಕೊಮ್ಮೆ, 13 ವಾರ್ಡ್​ಗಳಿಗೆ 5 ದಿನಕ್ಕೊಮ್ಮೆ ಉಳಿದ 13 ವಾರ್ಡ್​ಗಳಿಗೆ 7 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಪೈಕಿ 6 ವಾರ್ಡ್​ಗಳಿಗೆ ಬಾಡಿಗೆ ಬೋರ್​ವೆಲ್​ಗಳಿಂದ ನೀರು ಪೂರೈಸಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಾಮ ಎದುರಾಗುವುದು ನಿಚ್ಚಳವಾಗಿದೆ.
ಗ್ರಾಮೀಣ ಭಾಗದಲ್ಲೂ ಸಮಸ್ಯೆ: ಶಿಡ್ಲಘಟ್ಟ ತಾಲೂಕಿನ 33 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 50ಕ್ಕೆ ಹೆಚ್ಚಲಿದೆ. ತಾಲೂಕಿನ ಚೀಮಂಗಲ, ವಲ್ಲಪನಹಳ್ಳಿ, ಹೇಮಾರ್ಲಹಳ್ಳಿ, ಗಂಭೀರನಹಳ್ಳಿ, ಜಂಗಮಕೋಟೆ, ಭಕ್ತರಹಳ್ಳಿ, ಪಲಿಚೇರ್ಲು, ಮುಗಿಲಡಿಪಿ, ತಾದೂರು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ, ಟ್ಯಾಂಕರ್​ ಮೂಲಕ ನೀರು ಪೂರೈಸುತ್ತಾ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆಯಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ತಾಲೂಕಿನ ಸುಮಾರು 33 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು, ಕೊಳವೆ ಬಾವಿಗಳ ರೀ ಬೋರ್​ ಕೊರೆಸುವ ಅಗತ್ಯವಿದೆ. ಈ ಪೈಕಿ ಈಗಾಗಲೇ 9 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಮೋಟಾರ್​ ಪಂಪ್​ ಅಳವಡಿಸಲಾಗುತ್ತಿದೆ. ನೀರಿನ ಸಮಸ್ಯೆಳಿರುವ ಗ್ರಾಮಗಳಲ್ಲಿ ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಬಿ.ಎನ್​.ರವಿಕುಮಾರ್​, ಶಾಸಕ ಶಿಡ್ಲಘಟ್ಟ