ಗೌರಿಬಿದನೂರು: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಸಮೀಪ ಶನಿವಾರ ಮುಂಜಾನೆ 2.9 ತೀವ್ರತೆಯ ಭೂಕಂಪನ ದಾಖಲಾಗಿದೆ.
ಅಕ್ಟೋಬರ್ 24 ರ ಮುಂಜಾನೆ 3 ಗಂಟೆ 29 ನಿಮಿಷ 53 ಸೆಕೆಂಡಿಗೆ ಭೂಮಿ ಕಂಪಿಸಿದ್ದು, ಕೇಂದ್ರ ಬಿಂದು ಸೋಮಶೆಟ್ಟಿಹಳ್ಳಿ ಗ್ರಾಮದ ಪೂರ್ವಕ್ಕೆ ಸುಮಾರು 2 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ವಾಯವ್ಯಕ್ಕೆ 33 ಕಿ.ಮೀ., ತರಿದಾಳು ಗ್ರಾ.ಪಂ.ನಿಂದ ನೈಋತ್ಯಕ್ಕೆ 2.53 ಕಿ.ಮೀ ಮತ್ತು ಅಲಿಪುರ ಗ್ರಾ.ಪಂ.ನಿಂದ ವಾಯವ್ಯಕ್ಕೆ 4.30 ಕಿ.ಮೀ. ದೂರದಲ್ಲಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 5 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿದ್ದು, ಕೇಂದ್ರಬಿಂದುವಿನಿಂದ 20 ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಳೀಯರು ಸಣ್ಣ ಪ್ರಮಾಣದ ಕಂಪನ ಅನುಭವಿಸಿರುವ ಸಾಧ್ಯತೆಯಿದೆ. ಆದರೆ, ತೀವ್ರತೆ ಕಡಿಮೆ ಇರುವುದರಿಂದ ಯಾವುದೇ ಹಾನಿಯಾಗುವ ಸಾಧ್ಯತೆ ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್ ಡಿಎಂಸಿ) ಸ್ಪಷ್ಟಪಡಿಸಿದೆ. ಈ ಪ್ರದೇಶ ಭೂಕಂಪನ ವಲಯ-2ರಲ್ಲಿ ಬರುತ್ತಿದ್ದು, ಟೆಕ್ಟಾನಿಕ್ ನಕ್ಷೆಯ ಪ್ರಕಾರ ಭೂಗರ್ಭದಲ್ಲಿ ಯಾವುದೇ ರಚನಾತ್ಮಕ ಅಸ್ಥಿರತೆ ಕಂಡುಬಂದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.