ಚಿಕ್ಕಬಳ್ಳಾಪುರದಲ್ಲಿನ ಆಗ್ನೇಯ ಪದವೀಧರ ವಿಧಾನಪರಿಷತ್‌ ಚುನಾವಣೆಯ ಮತಗಟ್ಟೆ. 
ಚಿಕ್ಕಬಳ್ಳಾಪುರ

ವಿದ್ಯಾವಂತ ಮತದಾರರ ವೋಟು ಖರೀದಿಗೆ ಹಣ ಹಂಚಿಕೆ, ವ್ಯಾಪಕ ಆಕ್ರೋಶ

ಆಗ್ನೇಯ ಪದವೀಧರರ ವಿಧಾನಪರಿಷತ್‌ ಚುನಾವಣೆಯಲ್ಲಿ ಆಮಿಷ

ಚಿಕ್ಕಬಳ್ಳಾಪುರ: ಆಗ್ನೇಯ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ಹಣದ ಆಮಿಷವನ್ನೊಡ್ಡುತ್ತಿರುವುದರ ವಿರುದ್ಧ ಚಿಕ್ಕಬಳ್ಳಾಪುರ ಚುನಾವಣಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಿ.ಎಂ.ರವಿಕುಮಾರ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿನ ಪಿಎಲ್‌ ಡಿ ಬ್ಯಾಂಕಿನ ಕಟ್ಟಡದ ನೆಲ ಮಹಡಿಯಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸುರೇಶ್‌ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಹಣ ಹಂಚುತ್ತಿರುವುದು ಕಂಡು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಿಕ್ಕಿದೆ. ಇದರಲ್ಲಿನ ಇಬ್ಬರ ಪೈಕಿ ಒಬ್ಬಾತ ಶ್ರೀನಿವಾಸ್‌ ಎನ್ನುವುದು ತಿಳಿದು ಬಂದಿದೆ. ಇದರ ಮಾಹಿತಿ ಹಿನ್ನೆಲೆಯಲ್ಲಿ ಘಟನೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಂತೆ ಆರೋಪಿಗಳು ಹೊರಟು ಹೋಗಿದ್ದು ಸ್ಥಳದಲ್ಲಿ ೨೦೦ ಭಿತ್ತಿಪತ್ರಗಳು ಸಿಕ್ಕಿವೆ. ಇದನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮತದಾರರು ವೋಟಿಗಾಗಿ ೧ ಸಾವಿರ ರೂ ಪಡೆಯಲು ಗುಂಪುಗೂಡಿರುವುದು, ಹಣ ಪಡೆದುಕೊಳ್ಳುವುದರ ಜತೆಗೆ ರಾಜಾರೋಷವಾಗಿಯೇ ವೋಟಿಗೆ ಸಿಕ್ಕಿದ ಹಣದ ವಿಚಾರವಾಗಿ ಮಾತನಾಡುತ್ತಿರುವಂತಹ ವಿಡಿಯೋಗಳು ವೈರಲ್‌ ಆಗಿದ್ದು ಪದವೀಧರ ವಿದ್ಯಾವಂತರೇ ವೋಟನ್ನು ಮಾರಿಕೊಳ್ಳುತ್ತಿರುವಂತಹುದು ನಾಚಿಕೆಗೇಡು ಎಂಬ ಆಕ್ರೋಶ ವ್ಯಕ್ತವಾಗಿದೆ.