ಚಿಕ್ಕಬಳ್ಳಾಪುರ: ನಗರದ ಶೆಟ್ಟಿಹಳ್ಳಿ ಬಡಾವಣೆಯಲ್ಲಿನ ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿ, ಮಾಲು ವಶಪಡಿಸಿಕೊಳ್ಳುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಗಾಂಧಿನಗರದ ನಿವಾಸಿ ಆರ್.ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಿ (23) ಆರೋಪಿ. ಬೆಂಗಳೂರಿನ ಸಂಪಿಗೆ ನಗರದಲ್ಲಿ ವಾಸವಿದ್ದು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇದರ ನಡುವೆ ಹೆಚ್ಚಿನ ಹಣ ಸಂಪಾದನೆ, ಮೋಜು ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದಾನೆ.
ಕಳೆದ ಸೆ.೨ ರಂದು ಶೆಟ್ಟಿಹಳ್ಳಿ ಬಡಾವಣೆಯ ಆರ್.ಅರುಣ್ ಕುಮಾರ್ ಕುಟುಂಬಸ್ಥರು ಹೊರಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿತ್ತು. ಬಾಗಿಲನ್ನು ರಾಡ್ ನಿಂದ ಮೀಟಿ, ಕೊಠಡಿಯೊಳಗೆ ಪ್ರವೇಶಿಸಿದ ವೆಂಕಟೇಶ್ ಬೀರುವಿನಲ್ಲಿದ್ದ 105 ಗ್ರಾಂ ತೂಕದ ಬಂಗಾರದ ಆಭರಣಗಳು, 100 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 2 ಲಕ್ಷ ರೂ ನಗದನ್ನು ಕದ್ದು ಪರಾರಿಯಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆಗೆ ಡಿವೈಎಸ್ಪಿ ಆರ್.ಪ್ರಕಾಶ್ ಮಾರ್ಗದರ್ಶನದಲ್ಲಿ ಸಿಪಿಐ ಡಿ.ರಂಜನ್ ಕುಮಾರ್, ಪಿಎಸ್ಐಗಳಾದ ಎಸ್.ಎಂ.ಅಮರ್, ರತ್ನಾಭಾಯಿ, ಎಎಸ್ ಐ ರಮಣಾರೆಡ್ಡಿರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಸಿಸಿ ಕ್ಯಾಮೆರಾಗಳ ವಿಡಿಯೋ ದೃಶ್ಯಗಳು ಹಾಗೂ ಚಲನವಲನಗಳನ್ನಾಧರಿಸಿ, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು 7 ಲಕ್ಷ ರೂ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದೆ.