ಸಂಶೋಧಕರ ತಂಡದೊಂದಿಗೆ ಸದ್ಗುರು ಶ್ರೀ ಮಧುಸೂದನ್ ಸಾಯಿ.
ಚಿಕ್ಕಬಳ್ಳಾಪುರ: ಗತಕಾಲದ ಮೌಲ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಶೇಷವಾಗಿ ಆಧ್ಯಾತ್ಮಿಕ ಇತಿಹಾಸದ ಹೆಚ್ಚಿನ ಅಧ್ಯಯನಕ್ಕೆ ಆದ್ಯತೆ ನೀಡಲು ಭಾರತೀಯ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ ಹಾಗೂ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ನಿಣರ್ಯ ಕೈಗೊಂಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಕರ್ನಾಟಕದ ಆರಂಭಿಕ ಇತಿಹಾಸದ ಬಗೆಗಿನ ಮೂಲ ವಿಚಾರಗಳ ನಿರೂಪಣೆ ಹಾಗೂ ಐತಿಹಾಸಿಕ ವಿಚಾರಗಳ ಮರುಪರಿಶೀಲನೆಯ ಉದ್ದೇಶದೊಂದಿಗೆ ಕೈಗೊಂಡಿದ್ದ ಕದಂಬರು ಮತ್ತು ಕರ್ನಾಟಕದ ನಿರ್ಮಾಣದ ಕುರಿತ ವಿಚಾರ ಸಂಕಿರಣದಲ್ಲಿ ಮಹತ್ವದ ವಿಚಾರಗಳ ಚರ್ಚೆಯಾಯಿತು.
ಇಲ್ಲಿಯವರೆಗೂ ಇತಿಹಾಸ ಅಧ್ಯಯನದಲ್ಲಿ ಬಹುತೇಕ ಶೇ.೭೦ ರಷ್ಟು ಅಂಶಗಳು ರಾಜಕೀಯ ಆಡಳಿತ ವಿಚಾರಕ್ಕೆ ಮಾತ್ರ ಸೀಮಿತವಾಗಿದೆ. ಆಧ್ಯಾತ್ಮಿಕ, ಸಾಂಸ್ಕೃತಿಕ, ಪರಂಪರೆ, ಕಲೆ ವಿಚಾರದಲ್ಲಿ ಸಂಶೋಧನೆ ಸಾಲದು. ಮುಂಬರುವ ಪೀಳಿಗೆಯ ಜನರಲ್ಲಿ ಬೆಳೆಸಬೇಕಾದ ನಿರೀಕ್ಷೆಯ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಮತ್ತಷ್ಟು ಅಧ್ಯಯನಗಳಾಗಬೇಕಾಗಿದೆ. ಅದರಲ್ಲೂ ಮಹತ್ವದ ಆಧ್ಯಾತ್ಮಿಕತೆಯ ಇತಿಹಾಸಕ್ಕೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅತ್ಯಗತ್ಯತೆ ಮುದ್ರೆ ಒತ್ತಿದರು.
ವಿವಿಧ ಸಂಶೋಧನೆಗಳು ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಸ್ಥಳೀಯ ಭಾಷೆಗಳ ಪುಸ್ತಕ ಪ್ರಕಟಣೆಯ ಮೂಲಕ ಮಹತ್ವದ ಇತಿಹಾಸವನ್ನು ತಿಳಿಸುವುದೇ ಗರಿಮೆಯ ಕೆಲಸ ಎಂದು ಭಾರತೀಯ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ ಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಂಪತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕದಂಬರ ಕುರಿತ ಸಂಶೋಧನೆಯಲ್ಲಿ ದೆಹಲಿ-ಕೇಂದ್ರಿತ ಐತಿಹಾಸಿಕ ಕಲ್ಪನೆ ಮೀರಿದೆ. ಪ್ರಾದೇಶಿಕ ರಾಜಕೀಯ ವ್ಯವಸ್ಥೆಗಳು ಭಾರತದ ನಾಗರಿಕತೆಯ ವೈವಿಧ್ಯತೆ ಮತ್ತು ಆಳವನ್ನು ಅರ್ಥಮಾಡಿಕೊಳ್ಳುವಲ್ಲಿ ಕೇಂದ್ರ ಬಿಂದುವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.