ಜೀವಾವಧಿ ಶಿಕ್ಷೆಗೆ ಗುರಿಯಾದವರು.  
ಚಿಕ್ಕಬಳ್ಳಾಪುರ

ಯುವಕನನ್ನು ಕೊಲೆಗೈದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕಬಳ್ಳಾಪುರ: ಮದ್ಯ ಖರೀದಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಯುವಕನನ್ನು ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಸುರೇಂದ್ರಬಾಬು(೩೯), ಶ್ರೀನಾಥ(೩೬), ಎನ್.ವೆಂಕಟೇಶ್(೨೨) ಜೀವಾವಧಿ ಶಿಕ್ಷೆಗೆ ಗುರಿಯಾದವರು. ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಧರ್ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ೨೫ ಸಾವಿರ ರೂ ದಂಡ ವಿಧಿಸಿ, ತೀರ್ಪು ಪ್ರಕಟಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿಯ ಕ್ಯಾಂಟರ್ ಚಾಲಕ ವೈ.ಎಸ್.ಗಜೇಂದ್ರ(೨೪)ರನ್ನು ಕಳೆದ ೨೦೨೩ ರ ಡಿ.೬ ರಂದು ತಡರಾತ್ರಿ ಗ್ರಾಮದ ನಡು ಬೀದಿಯಲ್ಲಿ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಗ್ರಾಮದಲ್ಲಿನ ಎಂಎಸ್‌ಐಎಲ್ ಬಾರ್‌ನಲ್ಲಿ ಮದ್ಯ ಖರೀದಿಸುವ ವೇಳೆ ಗ್ರಾಮದ ಕೆಲ ಪುಂಡ ಯುವಕರು ಹಾಗೂ ಮೃತ ಗಜೇಂದ್ರ ನಡುವೆ ಹಳೇ ವೈಷಮ್ಯದ ವಿಚಾರವಾಗಿ ಗಲಾಟೆ ನಡೆದಿತ್ತು. ಇದರ ಸೇಡು ತೀರಿಸಿಕೊಳ್ಳಲು ಗಜೇಂದ್ರನ ಮೇಲೆ ಹಲ್ಲೆಗೆ ಪ್ಲಾನ್ ಮಾಡಿಕೊಂಡಿದ್ದ ಪುಂಡರ ಗುಂಪು, ಕೊಲೆ ಮಾಡಿದೆ. ಇದರ ಬಗ್ಗೆ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಗೇಪಲ್ಲಿ ಠಾಣೆ ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದ ತಂಡ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿತ್ತು.