ಸಾಂದರ್ಭಿಕ ಚಿತ್ರ 
ಚಿಕ್ಕಬಳ್ಳಾಪುರ

ನಿರಂತರ ಪೋಕ್ಸೋ ಪ್ರಕರಣಗಳ ದಾಖಲು, ಪತ್ತೆ ಪ್ರಮಾಣ ಹೆಚ್ಚಳ

ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ, ದಬ್ಬಾಳಿಕೆ ಸೇರಿದಂತೆ ವಿವಿಧ ಅಪರಾಧದ ಪೋಕ್ಸೋ ಪ್ರಕರಣಗಳು ಜಿಲ್ಲೆಯಲ್ಲಿ ನಿರಂತರವಾಗಿ ಹೆಚ್ಚಿಗೆ ವರದಿಯಾಗುತ್ತಿವೆ.
ಕಾನೂನು ಕಠಿಣ ನಿಯಮಗಳು, ಪೊಲೀಸ್‌ ಬಿಗಿ ಪಹರೆ ಹಾಗೂ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಅಪ್ರಾಪ್ತರ ಶೋಷಣೆ ಮಾತ್ರ ನಿಂತಿಲ್ಲ. ಶಾಲೆ, ಮನೆ ಸೇರಿದಂತೆ ಹಲವೆಡೆ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಅನುಗುಣವಾಗಿ ಜಿಲ್ಲಾ ಪೊಲೀಸ್‌ ಇಲಾಖೆಯ ಬಿರುಸಿನ ತನಿಖಾ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸುವ ಕೆಲಸವಾಗುತ್ತಿದೆ. ಮತ್ತೊಂದೆಡೆ ಮಕ್ಕಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರಸ್ಪರ ಸಮನ್ವಯತೆಯ ಜಾಗೃತಿ ಕಾರ್ಯಕ್ರಮಗಳಿಂದ ಪ್ರಕರಣಗಳ ವರದಿಯಾಗುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ದೂರು ಸಲ್ಲಿಸಿ, ಕಾನೂನು ಹೋರಾಟ ನಡೆಸುವಂತಹ ವಾತಾವರಣವು ವ್ಯಾಪಕವಾಗಿ ಕಂಡು ಬರುತ್ತಿದೆ.
ಕಳೆದ ೨೦೨೩ ರಲ್ಲಿ ೧೬೯, ೨೦೨೪ ರಲ್ಲಿ ೧೯೦, ೨೦೨೫ ರಲ್ಲಿ ೧೮೧ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು ಕಳೆದ ಮೂರು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ವರದಿಯ ವಾರ್ಷಿಕ ಸರಾಸರಿಯು ೧೬೦ ಪ್ರಕರಣಗಳಿಗೂ ಹೆಚ್ಚು ಇದೆ.