ಚಿಂತಾಮಣಿ ತಹಸೀಲ್ದಾರ್ ಕಚೇರಿ ಮುಂದೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಚಿಂತಾಮಣಿ ಬಿಜೆಪಿ ನಡೆಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಕೆ.ಎಂ.ರಾಜಶೇಖರ್ ರೆಡ್ಡಿ, ಅರುಣ್ಬಾಬು, ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಬೈ, ನಗರ ಅಧ್ಯಕ್ಷ ಗೋವಿಂದ ರಾಜು, ಗಾಜಾಲ ಶಿವ ಇದ್ದರು.
- ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ
- ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕುರ್ಚಿ ಜಂಜಾಟದಲ್ಲಿ ಕಾಲಹರಣ
- ತಹಸೀಲ್ದಾರ್ ಸುದರ್ಶನ್ ಯಾದವ್ಗೆ ಮನವಿ
ಚಿಂತಾಮಣಿ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ, ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕುರ್ಚಿ ಜಂಜಾಟದಲ್ಲಿ ಕಾಲಹರಣ ಮಾಡುತ್ತಿದೆ. ಪ್ರತಿ ದಿನ ಧಾರವಾಹಿಯಂತೆ ಅಧಿಕಾರ ಗದ್ದುಗೆ ಸಿಎಂ, ಡಿಸಿಎಂ ಹಗ್ಗ ಜಗ್ಗಾಟದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರುನಗರದ ಅಜಾದ್ ಚೌಕ್ನಲ್ಲಿ ಶನಿವಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಸಾಗಿ ಪ್ರತಿಭಟಿಸಿ ತಹಸೀಲ್ದಾರ್ ಸುದರ್ಶನ್ ಯಾದವ್ಗೆ ಮನವಿ ಸಲ್ಲಿಸಿ ಮಾತನಾಡಿದರು.
ರೈತರ ಜ್ವಲಂತ ಸಮಸ್ಯೆ ಕೇಳುವವರಿಲ್ಲ. 5 ಗ್ಯಾರಂಟಿ ನೀಡಿದ್ದೇವೆ ಎಂದು ಜನರನ್ನು ನಂಬಿಸಿ, ಖಜಾನೆ ಲೂಟಿ ಮಾಡುತ್ತಿದ್ದಾರೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ, ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿಲ್ಲ. ಬಡವರು, ಮಧ್ಯಮ ವರ್ಗಗಳ ವಿರೋಧಿಯಾಗಿರುವ ಕಾಂಗ್ರೆಸ್ ಜನರಿಗೆ 10 ರೂ. ನೀಡಿ, ದುಬಾರಿ ತೆರಿಗೆ ವಿಧಿಸಿ, 100 ರೂ. ಪಡೆದುಕೊಳ್ಳುತ್ತಿದೆ ಇಂಥ ಸರ್ಕಾರ ಬೇಕಾ ಎಂದು ಪ್ರಶ್ನಿಸಿದರು. ತಾಲೂಕು ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ, ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರನ್ನು ಮರೆತು ಕಣ್ಣೀರಿಗೆ ಕಾರಣವಾಗಿದ್ದು, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿಲ್ಲ. ರಾಜ್ಯದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದು ಕಂಡು ಕಾಣದಂತೆ ವರ್ತಿಸುತ್ತಿದೆ ಎಂದರು.ಆಂಜಪ್ಪ, ದೇವರಾಜ್, ಕುರುಟಹಳ್ಳಿ ಡಾಬಾ ಮಂಜುನಾಥ್, ಪ್ರದಿಪ್, ರೈತ ಮುಖಂಡ ತ್ಯಾಗರಾಜ್, ಬನಹಳ್ಳಿ ಮಂಜುನಾಥ್ ,ಆಂಜನೇಯ ರೆಡ್ಡಿ, ಪ್ರದಿಪ್, ಬಟ್ಲಹಳ್ಳಿ ಶಿವಣ್ಣ, ಶಿವಾರೆಡ್ಡಿ, ಮಂಜುನಾಥ್, ಆಂಜನೇಯರೆಡ್ಡಿ, ಅಶೋಕ್, ದೇವರಾಜ್, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.