ಚಿಂತಾಮಣಿ ಗಾಂಧಿನಗರ ಬಡಾವಣೆಯ ಊಲವಾಡಿ ಮುಖ್ಯರಸ್ತೆಯ ರಸ್ತೆ ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ, ಕಾಂಪೌಂಡ್, ಶೌಚಗೃಹ, ವಾಹನಗಳ ಶೆಡ್ನಗರಸಭೆಯಿಂದ ತೆರವು ಮಾಡಲಾಯಿತು.
ಚಿಂತಾಮಣಿ: ನಗರದ ವಾಹನ ದಟ್ಟಣೆ ರಸ್ತೆ ಗಾಂಧಿನಗರ ಬಡಾವಣೆಯ ಊಲವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ 2 ಇಕ್ಕೆಲಗಳಲ್ಲಿ ರಸ್ತೆ, ಚರಂಡಿ, ಪಾದಚಾರಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡ, ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ನಗರದ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಬಡಾವಣೆ ನಿವಾಸಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾರಾಯಣಸಿಂಗ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಚಿಂತಾಮಣಿ ನಗರಸಭೆ ಪೌರಾಯುಕ್ತರು ಸ್ಥಳ ಪರಿಶೀಲಿಸಿ ಒತ್ತುವರಿ ತೆರವಿಗೆ 3 ತಿಂಗಳ ಗಡುವು ನೀಡಿದ್ದರು. ಆದರೂ ತೆರವಾಗದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಪೌರಾಯುಕ್ತ ಜಿ.ಎನ್. ಚಲಪತಿ, ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅನಧಿಕೃತ ಅಂಗಡಿ ಮಳಿಗೆಗಳು, ಕಾರು ಶೆಡ್, ಕಾಂಪೌಂಡ್, ಶೌಚಗೃಹ, ಪೆಟ್ಟಿಗೆ ಅಂಗಡಿ ತೆರವು ಮಾಡಿದರು.
ಗಾಂಧಿನಗರ ಬಡಾವಣೆ ಮುಖ್ಯರಸ್ತೆಗೆ ಅಡ್ಡಲಾಗಿ ಪೆಟ್ಟಿಗೆ ಅಂಗಡಿ, ಕಟ್ಟಡ ನಿಮಾರ್ಣ ಮಾಡಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಪ್ರತಿನಿತ್ಯದ ಮಾರುಕಟ್ಟೆ ಜತೆಗೆ ವಾರದ ಸಂತೆಯಂದು ಹೆಚ್ಚು ವಾಹನ ಓಡಾಟದಿಂದ ಅಪಘಾತಗಳಾಗುತ್ತಿದ್ದು, ಪೌರಾಯುಕ್ತರು ಪರಿಶೀಲಿಸಿ ಗಡುವು ನೀಡಿದರೂ ತೆರವು ಮಾಡದ ಹಿನ್ನೆಲೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ್ದಾರೆ.
| ನಾರಾಯಣಸಿಂಗ್ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಆದೇಶದಂತೆ ಪ್ರತಿ ವಾರ 1 ವಾರ್ಡ್ನಲ್ಲಿ ಸಂಪೂರ್ಣವಾಗಿ ಕ್ಲೀನಿಂಗ್, ನೀರಿನ ಸಮಸ್ಯೆ, ಯುಜಿಡಿ, ತೆರಿಗೆ ಸಂಗ್ರಹ, ಬೀದಿ ದೀಪ ನಿರ್ವಹಣೆ ಮುಂತಾದವು ಕೈಗೊಳ್ಳುತ್ತಿದ್ದು, ಗಾಂಧಿನಗರ ಆಯ್ಕೆ ಮಾಡಿಕೊಂಡು ಸ್ವಚ್ಛತೆ ಜತೆಗೆ ಸಂಪೂರ್ಣ ಅಕ್ರಮ ಒತ್ತುವರಿ ತೆರವು ಮಾಡಲಾಯಿತು.
| ಜಿ.ಎನ್.ಚಲಪತಿ ಪೌರಾಯುಕ್ತ