ಚಿಕ್ಕಬಳ್ಳಾಪುರದ ಬೇಕರಿಯಲ್ಲಿ ಕೇಕ್ ಖರೀದಿಯಲ್ಲಿ ತೊಡಗಿರುವ ಗ್ರಾಹಕರು 
ಚಿಕ್ಕಬಳ್ಳಾಪುರ

ಕ್ರಿಸ್ಮಸ್ ಹಬ್ಬದ ವಿಶೇಷ, ಸಿಹಿ ತಿಂಡಿ‌ ತಿನಿಸುಗಳ ಭರ್ಜರಿ ಮಾರಾಟ

ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲೆಡೆ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಚರ್ಚುಗಳಲ್ಲಿ ಭರದ ಸಿದ್ಧತೆ ಕೈಗೊಳ್ಳಲಾಗಿದೆ.
ಈಗಾಗಲೇ ವಿಶೇಷ ದಿನದ ಹಿನ್ನೆಲೆಯಲ್ಲಿ ಬಗೆಬಗೆಯ ಬಣ್ಣವನ್ನು ಹೊರಹೊಮ್ಮಿಸುವ ವಿದ್ಯುದೀಪಾಲಂಕಾರಗಳಿಂದ ಪ್ರಾರ್ಥನಾ ಮಂದಿರಗಳು ಝಗಮಗಿಸುತ್ತಿವೆ. ಇನ್ನು ಪ್ರತಿ ವರ್ಷದಂತೆ ಜಿಲ್ಲಾ ಕೇಂದ್ರದಲ್ಲಿನ ಸಿಎಸ್‌ಐ, ಸೆಂಥ್‌ ಕ್ಸೇವಿಯರ್‌ ಸೇರಿದಂತೆ ವಿವಿಧ ಚರ್ಚುಗಳಲ್ಲಿ ನಕ್ಷತ್ರ ಮಾದರಿ ಆಕಾಶ ಬುಟ್ಟಿಗಳು, ಗೋದಲಿ ಹಾಗೂ ಕ್ರಿಸ್ಮಸ್‌ ಟ್ರೀ ಸೇರಿದಂತೆ ನಾನಾ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಬಾಲಯೇಸುವಿನ ಜನನ, ಯೇಸುವಿನ ಸಂದೇಶಾತ್ಮಕ ಸನ್ನಿವೇಶಗಳು ಸೇರಿದಂತೆ ಮಹತ್ತರವಾದ ವಿಚಾರಗಳನ್ನು ಸಾರುವ ಅಲಂಕಾರಿಕ ಮಂಟಪದ ಮನೆಗಳನ್ನು ನಿರ್ಮಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಲ್ಲಿ ಪ್ರಾರ್ಥನೆ ಸ್ಥಳಗಳನ್ನು ಅಗತ್ಯ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ.

*ಸಿಹಿ ತಿಂಡಿಗಳ ಮಾರಾಟ*
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬೇಕರಿಗಳಲ್ಲಿ ಬಗೆಬಗೆಯ ಕೇಕ್‌ ಸೇರಿದಂತೆ ಸಿಹಿ ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ. ವ್ಯಾಪಾರಿಗಳು ಪರಸ್ಪರ ಪೈಪೋಟಿಯಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಆಕರ್ಷಕ ಬಣ್ಣದ ಕೇಕುಗಳನ್ನು ಪ್ರದರ್ಶನಕ್ಕಿಟ್ಟಿದ್ದು ರಿಯಾಯಿತಿ ದರದ ಆಫರ್‌ ಗಳನ್ನು ನೀಡುತ್ತಿದ್ದಾರೆ. ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದಾರೆ.