ಬಾಗೇಪಲ್ಲಿ ಪಟ್ಟಣ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಕೆಟ್ಟು ನಿಂತಿರುವ ಬಸ್ಅನ್ನು ಪ್ರಯಾಣಿಕರು ತಳ್ಳುತ್ತಿರುವುದು.
- ಸಕಾಲಕ್ಕೆ ಶಾಲಾ&ಕಾಲೇಜು, ಕಚೇರಿ ತಲುಪಲಾಗದೆ ನರಕ
- ಕೇಳುವವರಿಲ್ಲ ಜನರ ಗೋಳು
- ಮೆಕಾನಿಕ್ಗಳ ಕೊರತೆಯೂ ಈ ಅವಸ್ಥೆಗೆ ಕಾರಣ
ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸಾರಿಗೆ ಬಸ್, ಸಕಾಲಕ್ಕೆ ಶಾಲಾ&ಕಾಲೇಜು, ಕಚೇರಿ ತಲುಪಲಾಗದೆ ನಿತ್ಯ ನರಕ ಅನುಭವಿಸುತ್ತಿರುವ ಪ್ರಯಾಣಿಕರು.
ಇದು, ಬಾಗೇಪಲ್ಲಿ ತಾಲೂಕಿನ ಜನರು ನಿತ್ಯವೂ ಅನುಭವಿಸುತಿರುವ ಪಡಿಪಾಟಲು. ಬಾಗೇಪಲ್ಲಿ ಸಾರಿಗೆ ಸಂಸ್ಥೆ ಡಿಪೋದಲ್ಲಿ 11 ಹೊಸ ಅಶ್ವಮೇಧ ಬಸ್ ಸೇರಿ ಒಟ್ಟು 108 ಬಸ್ಗಳಿದ್ದು, ನಗರ, ಗ್ರಾಮೀ ಣ ಸೇರಿ ಒಟ್ಟು 102 ಮಾರ್ಗಗಳಿಗೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳ ವೈಲ್ಯದಿಂದ ಬಸ್ಗಳ ಬಿಡಿ ಭಾಗ ಸರಬರಾಜಿಲ್ಲದೆ ದುರಸ್ತಿಗೆ ಬಂದಿರುವ ಬಸ್ಗಳನ್ನು ಓಡಿಸುತ್ತಿರುವುದರಿಂದ ಎಲ್ಲೆಂದರಲ್ಲಿ ಬಸ್ಗಳು ಕೆಟ್ಟು ನಿಲ್ಲುತ್ತಿವೆ. ಜತೆಗೆ ಮೆಕಾನಿಕ್ಗಳ ಕೊರತೆಯೂ ಈ ಅವಸ್ಥೆಗೆ ಕಾರಣ ಎಂಬ ದೂರುಗಳಿವೆ.
ಅಡ್ಜೆಸ್ಟ್ ಮಾಡಿಕೊಂಡು ಬನ್ನಿ
ಸಂಚರಿಸುವ ವೇಳೆ ಬಸ್ಗಳಿಗೆ ಬ್ರೇಕ್, ಕ್ಲಚ್ ಸಮಸ್ಯೆ, ಇಂಜಿನ್ನಲ್ಲಿ ತಾಂತ್ರಿಕ ದೋಷ ಇತರ ಸಮಸ್ಯೆಗಳು ಕಂಡು ಬಂದಾಗ ಬಸ್ ಚಾಲಕ, ನಿರ್ವಾಹಕ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದರೆ, ಬಸ್ ನಿಂತರೆ ಮಾತ್ರ ಕರೆ ಮಾಡಿ ಮೆಕಾನಿಕ್ಗಳು ಖಾಲಿಯಾಗಿ ಕುಳಿತಿಲ್ಲ, ನೀವೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಡಿಪೋಗೆ ಬಂದು ಬಿಡಿ ಎಂಬ ಉಡಾಫೆ ಉತ್ತರ ಸಿಗುತ್ತಿದೆ ಎಂದು ಬಹುತೇಕ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶೇ.60 ಮೆಕಾನಿಕ್ ಹುದ್ದೆ ಖಾಲಿ
ಬಾಗೇಪಲ್ಲಿ ಸಾರಿಗೆ ಸಂಸ್ಥೆ ಡಿಪೋನ ಮೆಕಾನಿಕ್ ವಿಭಾಗದಲ್ಲಿ ಒಟ್ಟು 70 ನೌಕರರಿರಬೇಕು. ಆದರೆ ಹಲವು ವರ್ಷಗಳಿಂದ ಹುದ್ದೆ ಭರ್ತಿಯಾಗದ ಕಾರಣ 26 ನೌಕರರು ಸೇವೆಯಲ್ಲಿದ್ದು, 44 ಹುದ್ದೆಗಳು ಖಾಲಿ ಇವೆ. ಇರುವ ಮೆಕಾನಿಕ್ಗಳಿಗೆ ಹಳೇ ಬಸ್ ಸಕಾಲಕ್ಕೆ ರಿಪೇರಿ ಮಾಡಲು ಸಾಧ್ಯವಾಗುತ್ತಿಲ್ಲ.
ಬಾಗೇಪಲ್ಲಿ ಡಿಪೋನಲ್ಲಿರುವ 108 ಬಸ್ಗಳ ಪೈಕಿ ಶೇ.20 ಬಸ್ಗಳು ಗುಜರಿಗೆ ಸೇರುವ ಹಳೇ ಬಸ್ಗಳಾಗಿದ್ದು, ಪ್ರಯಾಣಿಕರನ್ನು ಸಾಗಿಸಲು ಯೋಗ್ಯವಲ್ಲದಂತಾಗಿವೆ. ಬಹುತೇಕ 15 ವರ್ಷ ಪೂರ್ಣಗೊಂಡಿರುವ ಹಳೇ ಬಸ್ಗಳನ್ನೇ ಇಂದಿಗೂ ಗ್ರಾಮೀಣದ ಹಲವು ಮಾರ್ಗಗಳಿಗೆ ಕಳುಹಿಸುವ ಅನಿವಾರ್ಯತೆ ಇದೆ. ಸಮಸ್ಯೆಗಳ ಬಗ್ಗೆ ಚಾಲಕ, ನಿರ್ವಾಹಕ ಇಲಾಖೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವಂತಿಲ್ಲ, ಒಂದು ವೇಳೆ ಧೈರ್ಯ ಮಾಡಿ ದೂರು ಸಲ್ಲಿಸಿದರೆ ಕಡ್ಡಾಯ ರಜೆ ನೀಡದೆ, ಸಿಬ್ಬಂದಿ ಕೊರತೆ ನೆಪ ಹೇಳಿ ಹೆಚ್ಚುವರಿ ಡ್ಯೂಟಿ ಮಾಡುವಂತೆ ನೋಟಿಸ್ ನೀಡಿ ಚಾಲಕರಿಗೆ ಕಿರುಕುಳ ನೀಡುತ್ತಾರೆ.
| ಹೆಸರು ಹೇಳಲು ಇಚ್ಛಿಸದ ಬಸ್ ಚಾಲಕ, ಬಾಗೇಪಲ್ಲಿ
ಬಾಗೇಪಲ್ಲಿ ಡಿಪೋ ಒಂದರಲ್ಲೇ ಮೆಕಾನಿಕ್ಗಳ ಸಮಸ್ಯೆಗಳ ಇಲ್ಲ. ಜಿಲ್ಲೆಯ ಎಲ್ಲ ತಾಲೂಕು ಘಟಕಗಳಲ್ಲಿ ಸಮಸ್ಯೆ ಇದೆ. ಸಮಸ್ಯೆ ಪರಿಹಾರಕ್ಕೆ ಇಲಾಖೆಗೆ ಪತ್ರ ಬರೆಯಲಾಗಿದೆ. ಬಸ್ನ ಬಿಡಿಭಾಗಗಳ ಸರಬರಾಜು ಸಮರ್ಪವಾಗಿಯೇ ಇದೆ. ಪಿಟ್ನೆಸ್ ಇಲ್ಲದ ಹಳೇ ಬಸ್ಗಳನ್ನು ಇಲಾಖೆ ವಾಪಸ್ ಪಡೆದುಕೊಳ್ಳುವ ಕಾರ್ಯ ಪ್ರಾರಂಭಿಸಿದೆ. ಬಾಗೇಪಲ್ಲಿ ಡಿಪೋದ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಡಿವಿಜನಲ್ ಮೆಕಾನಿಕಲ್ ಇಂಜಿನಿಯರ್ಗೆ ಸೂಚಿಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇವೆ.
| ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ