ಗೌರಿಬಿದನೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಪಿನಾಕಿನಿ ಆಂಬುಲೆನ್ಸ್​ ನಿಲ್ದಾಣದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಶಾಸಕ ಪುಟ್ಟಸ್ವಾಮಿಗೌಡ ಅವರನ್ನು ಸನ್ಮಾನಿಸಲಾಯಿತು.  Be committed to preserving and nurturing the land and its culture.
ಚಿಕ್ಕಬಳ್ಳಾಪುರ

ನಾಡು, ಸಂಸ್ಕೃತಿ ಉಳಿಸಿ, ಬೆಳೆಸಲು ಬದ್ಧರಾಗಿ

ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಸಲಹೆ - ಸಾರ್ವಜನಿಕ ಆಸ್ಪತ್ರೆ ಬಳಿ ರಾಜ್ಯೋತ್ಸವ

ಗೌರಿಬಿದನೂರು: ಕನ್ನಡ ಭಾಷೆ, ನಾಡು, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕನ್ನಡ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಪಿನಾಕಿನಿ ಆಂಬುಲೆನ್ಸ್​ ನಿಲ್ದಾಣದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಆಂಬುಲೆನ್ಸ್​ ಚಾಲಕರು ಹಗಲು ರಾತ್ರಿ ಎನ್ನದೆ ಜನರ ಜೀವ ಉಳಿಸುವ ಸೇವೆ ಮಾಡುತ್ತಿದ್ದಾರೆ. ಅಂತಹ ಸೇವಾ ಮನೋಭಾವದವರಿಂದ ರಾಜ್ಯೋತ್ಸವ ಆಚರಣೆ ಇನ್ನಷ್ಟು ಅರ್ಥಪೂರ್ಣವಾಗಿದೆ.

ನಾಡು, ನುಡಿಗಾಗಿ ಹೋರಾಡಿದ ಮಹನೀಯರನ್ನು ಎಂದಿಗೂ ಮರೆಯಬಾರದು. ರಾಜ್ಯೋತ್ಸವ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ನಮ್ಮ ದೈನಂದಿನ ಜೀವನದಲ್ಲಿ, ವ್ಯವಹಾರದಲ್ಲಿ, ಆಡಳಿತದಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಮಕ್ಕಳಿಗೆ ಕನ್ನಡದ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಆಂಬುಲೆನ್ಸ್​ ಸೇವೆ ಎಂಬುದು ವೃತ್ತಿಯಲ್ಲ, ಅದು ಮಾನವ ಸೇವೆ. ಅಪಘಾತ, ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸುವ ಚಾಲಕರು ಹಾಗೂ ಸಿಬ್ಬಂದಿಯ ಸೇವೆ ನಿಜಕ್ಕೂ ಶ್ಲಾನೀಯ. ಸರ್ಕಾರದಿಂದ ಅವರಿಗೆ ಅಗತ್ಯ ಸೌಲಭ್ಯ, ಬೆಂಬಲ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷಿ$್ಮಕಾಂತ್​ ಮಾತನಾಡಿ, ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಆಂಬುಲೆನ್ಸ್​ ಸಿಬ್ಬಂದಿ ನೀಡುತ್ತಿರುವ ಸಹಕಾರ ಮಹತ್ವದ್ದು. ವೈದ್ಯರು, ದಾದಿಯರು, ಚಾಲಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ರೋಗಿಗಳ ಜೀವ ಉಳಿಸಲು ಸಾಧ್ಯ ಎಂದು ಹೇಳಿದರು.

ಆಂಬುಲೆನ್ಸ್​ ಚಾಲಕ ಚತ್ರಂ ಶ್ರೀಧರ್​ ಮಾತನಾಡಿ, ಆಂಬುಲೆನ್ಸ್​ ನಿಲ್ದಾಣದಲ್ಲಿ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಚಾಲಕರು ಹಾಗೂ ಸಿಬ್ಬಂದಿ ಒಟ್ಟಾಗಿ ಕನ್ನಡ ಧ್ವಜಾರೋಹಣ ಮಾಡಿ, ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಕನ್ನಡಕ್ಕಾಗಿ ನಾವು ನಿರಂತರವಾಗಿ ಸೇವೆ ಮಾಡುತ್ತೇವೆ ಎಂದರು.

ಮಾಜಿ ಸಚಿವ ಎನ್​ಎಚ್​ ಶಿವಶಂಕರ ರೆಡ್ಡಿ, ನಗರ ಠಾಣೆ ಪಿಎಸ್​ಐ ವರಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್​.ನರಸಿಂಹಮೂರ್ತಿ, ಮುಖಂಡರಾದ ನಾಗಾರ್ಜುನ, ರೈಲ್ವೆ ಬೇಗ್​, ಆಂಬುಲೆನ್ಸ್​ ನಿಲ್ದಾಣದ ಕೋಟೆ ಜಗದೀಶ್​, ಪ್ರಶಾಂತ್​, ಸಂಜಯ್​, ಸೂರಜ್​, ವಸೀಮ್​ ಇದ್ದರು.