ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಕೇಂದ್ರ ಸೇವೆ ಜಾಗೃತಿ ಮಾಹಿತಿ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ವಿವಿಧ ಪ್ರೌಢಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮಗಳ ಬಗೆಗಿನ ಜಾಗೃತಿ ಪ್ರಕ್ರಿಯೆಯು ಬಿರುಸಿನಿಂದ ನಡೆಯುತ್ತಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ನೇತೃತ್ವದಲ್ಲಿ ಕೈಗೊಂಡಿದ್ದ ಸಭೆಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ, ಉಲ್ಲಂಘನೆ ಪ್ರಕರಣಗಳಿಗೆ ಅವಕಾಶ ನೀಡದಿರುವುದು, ಪ್ರಸ್ತುತ ಇರುವ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿತ್ತು. ಜತೆಗೆ ಉತ್ತಮ ನಿರ್ವಹಣೆಗೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.
ಜಿಲ್ಲೆಯಲ್ಲಿನ 1488 ಸರ್ಕಾರಿ ಪ್ರೌಢ ಶಾಲೆಗಳ ಪೈಕಿ 1486 ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಲಾಗಿದೆ. 1473 ಶಾಲೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನಿಡಲಾಗಿದೆ. ಹಾಗೆಯೇ 1098 ಸಹಾಯವಾಣಿ ಸಂಖ್ಯೆಯ ಅನುಕೂಲಗಳ ಗೋಡೆ ಬರಹಗಳನ್ನು ಬರೆಸಲಾಗಿದೆ. ಉಳಿದಂತೆ 85 ಅನುದಾನಿತ ಶಾಲೆಗಳ ಪೈಕಿ 84 ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚನೆ, 85 ಪ್ರೌಢಶಾಲೆಗಳಲ್ಲಿ ಸಹಾಯವಾಣಿ ಸಂಖ್ಯೆ ಗೋಡೆ ಬರಹ ಬರೆಸಿದ್ದು ಸಲಹಾ ಪೆಟ್ಟಿಗೆಗಳನ್ನಿಡಲಾಗಿದೆ. ಉಳಿದಂತೆ 261 ಖಾಸಗಿ ಪ್ರೌಢಶಾಲೆಗಳ ಪೈಕಿ 260 ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ಇದ್ದು 259 ಶಾಲೆಗಳಲ್ಲಿ ಸಹಾಯವಾಣಿ ಗೋಡೆ ಬರಹ ಬರೆಸಿದ್ದು ದೂರು ಪೆಟ್ಟಿಗೆಯನ್ನಿಡಲಾಗಿದೆ.