Arrest of two-wheeler thieves
ಗೌರಿಬಿದನೂರು: ನಗರ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳ್ಳರಿಬ್ಬರನ್ನು ಬಂಧಿಸಿ, 10 ಬೈಕ್ ಹಾಗೂ 420 ಕೆ.ಜಿ ಮೆಣಸಿನ ಕಾಯಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಾದಲವೇಣಿಯ ವಿನೋದ್ ಕುಮಾರ್(23) ಹಾಗೂ ಆಂಧ್ರದ ಗುಂಟೂರು ಜಿಲ್ಲೆಯ ಆಟೋನಗರ ವಾಸಿ ಚೆಲ್ಲಾ ಸೋಮಶಂಕರ(22) ಬಂಧಿತರು.
ಜು.16ರಂದು ಪೊಲೀಸರಾದ ಶ್ರೀನಿವಾಸರೆಡ್ಡಿ ಹಾಗೂ ಮಹಾಂತೇಶ ಪರಂಗಿ ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಾಪುರ ಕಡೆಯಿಂದ ಬೈಕ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೆಲ್ಲಾ ಸೋಮಶಂಕರನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕ್ಗಳ ಕಳವಿನ ಬಗ್ಗೆ ಬಾಯಿಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿಯಿಂದ ಮತ್ತೊಬ್ಬ ಆರೋಪಿ ವಿನೋದ್ ಕುಮಾರ್ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಆರೋಪಿಗಳಿಂದ 67 ಸಾವಿರ ರೂ. ಮೌಲ್ಯದ 420 ಕೆಜಿ ತೂಕದ 21 ಒಣ ಮೆಣಸಿನ ಕಾಯಿ ಬ್ಯಾಗ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೃತ್ತದ ಸಿಪಿಐ ಅಂಜನ್ ಕುಮಾರ್ ಮಾರ್ಗದರ್ಶನದಲ್ಲಿ ಗೌರಿಬಿದನೂರು ನಗರ ಠಾಣೆ ಪಿಎಸ್ಐ ಲಲಿತಮ್ಮ ಹಾಗೂ ವರಲಕ್ಷ್ಮಿ, ಸಿಬ್ಬಂದಿ ಶ್ರೀನಿವಾಸರೆಡ್ಡಿ, ಮಹಾಂತೇಶ ಪರಂಗಿ, ತಿಪ್ಪೇಶ, ಅಶೋಕ, ವಿನಯ್ ಕುಮಾರ್ ಹಾಗೂ ತನಿಖಾ ಸಹಾಯಕರಾದ ಸುಬ್ರಮಣಿ, ಅನಿತಾ ಕಾರ್ಯಾಚರಣೆಯಲ್ಲಿ ಇದ್ದರು.