ಆರೋಪಿಗಳಿಂದ ವಶಪಡಿಸಿಕೊಂಡು ಹಣ, ಮಾಲಿನೊಂದಿಗೆ ಎಸ್ಪಿ ಕುಶಾಲ್ ಚೌಕ್ಸೆ ಹಾಗೂ ಸಿಬ್ಬಂದಿ
ರಾಜಸ್ಥಾನದ ಕಾಛ್ ಬಲೀ ಗ್ರಾಮದ ಹನುಮಂತ್ ಸಿಂಗ್ (26) ಹಾಗೂ ದೇವಘಡ್ ತಾಲೂಕಿನ ಬೈರುಸಿಂಗ್ (26) ಬಂಧಿತರು. ಮತ್ತೊರ್ವ ಆರೋಪಿ ರಮೇಶ್ ಕುಮಾರ್ ಪಂಡಿತ್ ಪರಾರಿಯಾಗಿದ್ದು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಧಿತರಿಂದ 20 ಕೆ.ಜಿ.ತೂಕದ 8 ಬೆಳ್ಳಿಯ ಬಿಸ್ಕೆಟ್ ಗಳು, 13 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಎಯು ಚಿನ್ನಾಭರಣ ಅಂಗಡಿಯಲ್ಲಿ 139 ಕೆ.ಜಿ.ತೂಕದ ಬೆಳ್ಳಿ ಆಭರಣಗಳು ಕಳವಾಗಿರುವುದಕ್ಕೆ ಸಂಬಂಧಿಸಿದಂತೆ ಕಳೆದ 2025 ರ ಡಿ.23 ರಂದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜಸ್ಥಾನದಿಂದ ಬಂದಿದ್ದ ಮೂವರು ಆರೋಪಿಗಳು ಬೆಂಗಳೂರಿನಲ್ಲಿನ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಇದರ ನಡುವೆ ಕಳ್ಳತನಕ್ಕೆ ಅನುಕೂಲವಾಗುವ ಚಿನ್ನಾಭರಣ ಅಂಗಡಿಗಳನ್ನು ಹುಡುಕಾಡಿದ್ದಾರೆ. ಇದೇ ವೇಳೆ ಹಿಂಬದಿಯ ಕಟ್ಟಡದ ಮೆಟ್ಟಿಲು ಹಿಂಭಾಗದಿಂದ ಬಂದ ಅಡಗಿ ಕುಳಿತುಕೊಳ್ಳಲು ಸಹಕಾರಿ, ಯಾರಿಗೂ ಕಾಣಿಸದ ಲೆಕ್ಕಾಚಾರದಲ್ಲಿ ಎಯು ಚಿನ್ನಾಭರಣ ಅಂಗಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನೂ ಮೊದಲ ದಿನ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದಾಗ ಈಶ ಆದಿಯೋಗಿ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ, ಬಳಿಕ ಬೆಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ ಎರಡನೇ ದಿನ ಎದುರಾದಾಗ ಮತ್ತೆ ಪ್ರವಾಸಿತಾಣದ ಪ್ರವಾಸದ ಹೇಳಿಕೆ ನೀಡಿದ್ದಾರೆ. ಕೊನೆಗೆ ಮೂರನೇ ದಿನ ಚಿಕ್ಕಬಳ್ಳಾಪುರಕ್ಕೆ ಬಂದು ಆಭರಣಗಳನ್ನು ಕದ್ದು ಪರಾರಿಯಾಗಿದ್ದರು.