ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದ ಹೊರ ರೋಗಿಗಳು ವೈದ್ಯರನ್ನು ಭೇಟಿಯಾಗಲು ಆಸ್ಪತ್ರೆಯಲ್ಲಿ ಚೀಟಿ ಪಡೆಯಲು ಸಾಲಲ್ಲಿ ನಿಂತಿರುವುದು.
- ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಅಳಲು
- ನಾಗರಿಕರಿಗೆ ಉತ್ತಮ ಚಿಕಿತ್ಸೆ ಸಿಗಬೇಕೆಂಬ ಉದ್ದೇಶ
- 50 ಹಾಸಿಗೆಗಳ ವ್ಯವಸ್ಥೆ
ಸುಸಜ್ಜಿತ ಕಟ್ಟಡ, ಅರ್ಹ ವೈದ್ಯರು, ಅಗತ್ಯಕ್ಕನುಗುಣವಾಗಿ ಸಿಬ್ಬಂದಿ, ಆಂಬುಲೆನ್ಸ್, ಪ್ರಯೋಗಶಾಲೆ ಎಲ್ಲವೂ ಇದ್ದರೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.
ಹೌದು.. ತಾಲೂಕಿನ ನಾಗರಿಕರಿಗೆ ಉತ್ತಮ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ನಿರ್ಮಿಸಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಕಾಯಂ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರೂ ರೋಗಿಗಳಿಗೆ ಸಮರ್ಪಕ ಸೇವೆ ದೊರಕುತ್ತಿಲ್ಲ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ವ್ಯವಸ್ಥೆ ಇದ್ದು, ಇತ್ತೀಚೆಗೆ ಹೆಚ್ಚುವರಿಯಾಗಿ 10 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಅನುಮೋದನೆಯಾಗಿ, ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ.
ನಗರ ಸೇರಿ ಗ್ರಾಮೀಣದ ಬಹುತೇಕರು ಆರ್ಥಿಕವಾಗಿ ರೇಷ್ಮೆಯನ್ನೇ ನಂಬಿದ್ದಾರೆ. ಇದರಿಂದ ಬಹುತೇಕರು ಅಸ್ತಮಾ, ಟಿಬಿ ಕಾಯಿಲೆಯಿಂದ ಬಳಲುವವರಿದ್ದು, ಇವರೆಲ್ಲ ಇದೇ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ತ್ವರಿತ ಆರೋಗ್ಯ ಸೇವೆ ನೇಪಥ್ಯ: ವೈದ್ಯರಿದ್ದರೂ ಸಕಾಲಕ್ಕೆ ಚಿಕಿತ್ಸೆ ಸಿಗುವುದಿಲ್ಲ. ಮೊದಲಿಗೆ ಹೊರ ರೋಗಿಗಳ ಚೀಟಿ ಪಡೆಯಲು ಪರದಾಡಬೇಕಿದೆ. ಚೀಟಿ ನೀಡಲು 2 ಕೌಂಟರ್ಗಳಿವೆಯಾದರೂ ಒಬ್ಬರೇ ಚೀಟಿ ವಿತರಿಸುತ್ತಾರೆ. ಚೀಟಿ ಪಡೆದು ವೈದ್ಯರ ಬಳಿ ಹೋಗುವಷ್ಟರಲ್ಲಿ ವೈದ್ಯರು ಕಾಫಿ, ಟೀ, ಊಟಕ್ಕೆಂದು ಹೋಗಿರುತ್ತಾರೆ. ಇದರಿಂದ ತ್ವರಿತ ಆರೋಗ್ಯ ಸೇವೆ ಸಿಗುತ್ತಿಲ್ಲ ಎನ್ನುವುದು ನಾಗರಿಕರ ದೂರಾಗಿದೆ.
ಒಂದೆರಡು ಗಂಟೆ ಕಾದು ವೈದ್ಯರ ಬಳಿ ಹೋದರೆ ವೈದ್ಯರು ಸೌಜನ್ಯಕ್ಕೂ ರೋಗಿಯ ಮುಖ ನೋಡುವುದಿಲ್ಲ, ಏನಾಗ್ತಿದೆ, ಯಾವಾಗಿಂದ, ಇವತ್ತು ಯಾಕೆ ಬಂದ್ರಿ, ಈ ಮಾತ್ರೆ ಬರೆದಿದ್ದೀನಿ, ತಗೊಳಿ ಎಂದು ಹೇಳಿ ಕಳುಹಿಸುತ್ತಾರೆ ಎಂಬುದು ಕೆಲ ರೋಗಿಗಳ ದೂರಾಗಿದೆ.
ಶಾಸಕ ಬಿ.ಎನ್.ರವಿಕುಮಾರ್ ಉತ್ತಮ ಶಿಕ್ಷಣ, ಆರೋಗ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ರೋಗಿಗಳಿಗೆ ಸವಲತ್ತು ಕಲ್ಪಿಸುವುದು ಸೇರಿ ಆಸ್ಪತ್ರೆ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಜತೆಗೆ ಆಸ್ಪತ್ರೆ ಆವರಣದಲ್ಲಿ 8 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ ನಿಮಾರ್ಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದು,ಕಾಮಗಾರಿ ಪ್ರಗತಿಯಲ್ಲಿದೆ.
ಸಂಜೆ ಜಿಲ್ಲಾ ಕೇಂದ್ರ, ಬೆಂಗಳೂರಿನ ಒಳ್ಳೆಯ ಆಸ್ಪತ್ರೆಗೆ ಹೋಗಿ ಎಂದು ಕೈ ತೊಳೆದುಕೊಳ್ಳುವ ವೈದ್ಯರ ಸಂಖ್ಯೆ ಹೆಚ್ಚಿದೆ. ವೈದ್ಯರು ಇಲ್ಲಿ ಸೇವೆ ಸಲ್ಲಿಸುವುದಕ್ಕಿಂತ ಹೆಚ್ಚಾಗಿ ಖಾಸಗಿ ಕ್ಲಿನಿಕ್ಗಳಲ್ಲಿ ಇರುತ್ತಾರೆ. ಇಂತಹ ಕ್ಲಿನಿಕ್ಗೆ ಬನ್ನಿ ಅಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎನ್ನುತ್ತಾರೆ ಎಂಬ ಆರೋಪ ನಾಗರಿಕ ವಲಯದಲ್ಲಿ ಕೇಳಿ ಬರುತ್ತದೆ.
ಇಎನ್ಟಿ, ಡೆಂಟಲ್, ಮಕ್ಕಳ ತಜ್ಞರು, ಸ್ತ್ರೀರೋಗ, ಫಿಜಿಷಿಯನ್, ಸರ್ಜನ್, ಸೀನಿಯರ್, ಪೆಥಾಲಜಿಸ್ಟ್, ಅನಸ್ತೇಶಿಯಾ, ಕಣ್ಣಿನ ವೈದ್ಯರಿರುವ ನಗರದ ಆಸ್ಪತ್ರೆಯಲ್ಲಿ ಮೂಳೆ ತಜ್ಞ, ರೇಡಿಯಾಲಜಿಸ್ಟ್, ತುರ್ತು ವಿಭಾಗದ ವೈದ್ಯರ ಕೊರತೆಯಿದೆ. 33 ಜನರಿರಬೇಕಾದ ಡಿ&ಗ್ರೂಪ್ ನೌಕರರ ಪೈಕಿ ಒಬ್ಬರು ಕಾಯಂ, 14 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. 3 ಆಂಬುಲೆನ್ಸ್, 12 ಮಂದಿ ನಾನ್ ಕ್ಲಿನಿಕಲ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಮಗೆ ತ್ವರಿತವಾಗಿ ಮೂಳೆತಜ್ಞ, ರೇಡಿಯಾಲಜಿಸ್ಟ್, ತುರ್ತು ವಿಭಾಗದ ವೈದ್ಯರ ಅವಶ್ಯಕತೆಯಿದೆ.
ಆಡಳಿತ ವೈದ್ಯಾಧಿಕಾರಿ, ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ