ಬರದ ಛಾಯೆ ಆವರಿಸಿರುವುದು ಒಂದೆಡೆಯಾದರೆ, ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಬತ್ತಿರುವುದು ಬಯಲುಸೀಮೆ ಭಾಗದ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಈ ನಡುವೆಯೂ ವ್ಯವಸಾಯವನ್ನೇ ನೆಚ್ಚಿಕೊಂಡ ರೈತರೊಬ್ಬರು ಸುಂದರ ಬದುಕು ರೂಪಿಸಿಕೊಂಡಿದ್ದಾನೆ.
ಹೌದು... ನಡಿಪಿನಾಯಕನಹಳ್ಳಿಯ ಪ್ರಸನ್ನಕುಮಾರ್ 4 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ಬೆಳೆ ಬೆಳೆದಿದ್ದು, ಗಮನಸೆಳೆದಿದ್ದಾರೆ.
ಓದಿದ್ದು ಎಸ್ಸೆಸ್ಸೆಲ್ಸಿವರೆಗಾದರೂ, ಚಿಕ್ಕಂದಿನಿಂದಲೂ ಕೃಷಿಯ ಮೇಲಿದ್ದ ಆಸಕ್ತಿ ಹಾಗೂ ಶ್ರದ್ಧೆ ಅವರನ್ನು ಪ್ರಗತಿಪರ ರೈತನ ಹಾದಿಗೆ ಕೊಂಡೊಯ್ಯುತ್ತಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡದೇ ಕೃಷಿಯಲ್ಲಿಯೇ ತೊಡಗಿಸಿಕೊಂಡು, 30 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಪ್ರಾರಂಭದಲ್ಲಿ ನೀರು ಯಥೇಚ್ಛವಾಗಿದ್ದರಿಂದ ಹೆಚ್ಚಾಗಿ ಹಿಪು$್ಪನೇರಳೆ ಬೆಳೆಯುತ್ತಿದ್ದರು. ಆದರೆ ದಿನಗಳು ಕಳೆದಂತೆ ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿದ್ದರಿಂದ ಕೊಳವೆಬಾವಿಗಳ ಮೂಲಕ ನೀರು ತೆಗೆದು ಕೃಷಿ ಮಾಡುವ ಅನಿವಾರ್ಯತೆ ಎದುರಾಯಿತು. ಜತೆಗೆ ಬೆಳೆ ಕಟಾವಿಗೆ ಕೂಲಿಗಳು ಸಿಗುವುದಿಲ್ಲ. ಅದಕ್ಕೆ ತಕ್ಕಂತೆ ಜಮೀನಿನಲ್ಲಿ ಚಿಲ್ಲರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಒಟ್ಟಾರೆ ಕೃಷಿಯಲ್ಲೇ ತೃಪ್ತ ಜೀವನ ನಡೆಸುತ್ತಿದ್ದಾರೆ.
ಕೊಳವೆ ಬಾವಿಯಿಂದ ನೀರು ಪೂರೈಕೆ
4 ಎಕರೆ ಜಮೀನಿನಲ್ಲಿ ದ್ರಾಕ್ಷಿ, ದಾಳಿಂಬೆ, ಶುಂಠಿ, ಬೀಟ್ರೂಟ್, ಮೆಂತೆ ಸೇರಿ ವಿವಿಧ ರೀತಿಯ ಬೆಳೆಯಿದೆ. ಜಮೀನಿನಲ್ಲಿ 3 ಕೊಳವೆ ಬಾವಿಯಿದ್ದು, ಅದರಿಂದಲೇ ನೀರು ಪೂರೈಕೆಯಾಗುತ್ತಿದೆ. ದಿನವಿಡೀ ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡಿರುವ ಪ್ರಸನ್ನ ಕುಮಾರ್ ಮಾರುಕಟ್ಟೆಯ ಬೇಡಿಕೆಗನುಸಾರ ವಿಭಿನ್ನ ರೀತಿಯ ಬೆಳೆ ಬೆಳೆಯುತ್ತಾರೆ. ಒಂದರಲ್ಲಿ ನಷ್ಟವುಂಟಾದರೂ ಮತ್ತೊಂದರಲ್ಲಿ ಲಾಭ ಬರುತ್ತದೆ ಎನ್ನುವ ಭರವಸೆಯಲ್ಲಿ ಹೊಸ ಪ್ರಯೋಗಳನ್ನು ಅನುಸರಿಸುತ್ತಿದ್ದಾರೆ.
ತಾವು ಬೆಳೆದ ದ್ರಾ, ದಾಳಿಂಬೆ, ಶುಂಠಿ ಇವೆಲ್ಲವನ್ನು ಖರೀದಿಸಲು ತೋಟದ ಬಳಿಯೇ ವ್ಯಾಪಾರಸ್ಥರು ಬರುತ್ತಾರೆ. ಇನ್ನುಳಿದಂತೆ ಮೆಂತ್ಯಾ, ಬೀಟ್ ರೂಟ್ ಇವುಗಳಿಗೆ ಬೆಲೆಯಿದ್ದರೆ ವ್ಯಾಪಾರಸ್ಥರು ತೋಟದ ಬಳಿ ಬರುತ್ತಾರೆ, ಇಲ್ಲವಾದಲ್ಲಿ ನಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತೇವೆ. ಕೃಷಿಯೊಂದರಲ್ಲಿಯೇ ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುತ್ತೇನೆ.
ಪ್ರಸನ್ನಕುಮಾರ್, ನಡಿಪಿನಾಯಕನಹಳ್ಳಿ
ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲೂಕು.
ದೂ. ಸಂಖ್ಯೆ: 6366335784(ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಕರೆ ಮಾಡಬಹುದು)
ದ್ರಾಕ್ಷಿ, ಶುಂಠಿ ಮುಂತಾದವುಗಳನ್ನು ವರ್ಷಕ್ಕೆ ಒಂದೇ ಬೆಳೆ ತೆಗೆಯಬಹುದು. ಉಳಿದಂತೆ ಬೀಟ್ರೂಟ್ ಅಂತಹ ತರಕಾರಿಗಳು ವಾರ್ಷಿಕ 2 ಬೆಳೆ ತೆಗೆಯಬಹುದು. ಭೂಮಿಯನ್ನು ಖಾಲಿ ಬಿಡಬಾರದು ಎನ್ನುವ ನಿಟ್ಟಿನಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದೇನೆ. ಕೃಷಿಯಲ್ಲಿ ನಿಖರವಾಗಿ ಇಂತಿಷ್ಟೇ ಲಾಭ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ. ಹಾಗಾಗಿ ಲಾಭ, ನಷ್ಟ ನೋಡದೇ ಕೃಷಿಯಲ್ಲೇ ತೊಡಗಿಸಿಕೊಂಡಿದ್ದೇನೆ.