ಜಿಲ್ಲೆ

ಪಾರಂಪರಿಕ ಶಿಕ್ಷಣದಲ್ಲಿದೆ ಭ್ರಾತೃತ್ವ: ಆರ್​ಎಸ್​ಎಸ್​ ಮುಖ್ಯಸ್ಥ ಡಾ.ಮೋಹನ್​ ಭಾಗವತ್​ ಅಭಿಪ್ರಾಯ

ಚಿಕ್ಕಬಳ್ಳಾಪುರ: ಭಾರತದ ಪಾರಂಪರಿಕ ಶಿಕ್ಷಣವು ಉತ್ತಮವಾದ ಪ್ರತಿಯೊಂದು ಅಂಶಗಳನ್ನು ಜೋಡಿಸಿ ಸಮನ್ವಯಗೊಳಿಸುವಂಥದ್ದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ಸರಸಂ ಚಾಲಕ್​ ಡಾ.ಮೋಹನ್​ ಭಾಗವತ್​ ಅಭಿಪ್ರಾಯಪಟ್ಟರು.


ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಶ್ರೀ ಸತ್ಯಸಾಯಿ ಪ್ರೇಮಾಮೃತಮ್ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನಾತನ ಕಾಲದಿಂದಲೂ ದೇಶೀಯ ಕಲೆ, ಸಂಸ್ಕೃತಿ ಸಮನ್ವಯಗೊಂಡು ಬೆಳವಣಿಗೆ ಕಂಡಿರುವ ಭಾರತದ ಪರಂಪರೆಯ ಶಿಕ್ಷಣವು, ಜಾಗತಿಕ ಭ್ರಾತೃತ್ವ, ಉತ್ತಮ ಚಾರಿತ್ರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ವೈಶಿಷ್ಟ್ಯತೆಯನ್ನು ಹೊಂದಿದೆ. ಜಗತ್ತನ್ನು ಒಗ್ಗೂಡಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಆದರೆ, ಆಧುನಿಕ ವಿಜ್ಞಾನವು ಪ್ರತಿಯೊಂದನ್ನು ಪ್ರತ್ಯೇಕಿಸಿದ ಕಾರಣ ಸಂಘಷರ್ಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.


ಪ್ರಕೃತಿಯು ನಶ್ವರ. ಆದರೆ, ಒಳ್ಳೆಯ ಆದರ್ಶ ತತ್ವವು ಶಾಶ್ವತ. ವೈಯಕ್ತಿಕ ಉನ್ನತಿಯ ಜತೆಗೆ ಸಮಾಜದ ಉನ್ನತಿಯನ್ನು ಬಯಸುವುದೇ ಮಾನವೀಯತೆ ಮತ್ತು ಮಾನವ ಅಭ್ಯುದಯ. ಇದರ ಅನುಕರಣೆಯ ಧರ್ಮದಿಂದ ಮನುಷ್ಯ ಉನ್ನತ ಸ್ಥಾನಕ್ಕೇರುತ್ತಾನೆ ಎಂದರು.


ಜೀವನದಲ್ಲಿ ಹೊಸ ಪರಿವರ್ತನೆಯ ಜತೆಗೆ ಹಳೇ ವಿವೇಕದ ತಳಹದಿಯಲ್ಲಿ ಸಾರ್ಥಕ ಬದುಕನ್ನು ರೂಪಿಸಿಕೊಳ್ಳುವುದು ಅಭಿವೃದ್ಧಿಯ ಸಂಕೇತ. ಇದಕ್ಕೆ ವ್ಯಕ್ತಿ, ಸಮಾಜ, ದೇಶದ ಮೂಲಕ ಇಡಿ ಪ್ರಪಂಚದ ಉನ್ನತಿಯನ್ನು ಬಯಸುವುದೇ ಭಾರತದ ಪರಂಪರೆಯ ಅಂತರಾರ್ಥವಾಗಿದೆ ಎಂದರು.


ಕರ್ಮದ ಜತೆಗೆ ಜೀವನದ ಮರ್ಮವನ್ನು ಅರಿತು, ಕಾರ್ಯಪ್ರವೃತ್ತರಾದಾಗ ಬದುಕು ಸಾರ್ಥಕವಾಗುತ್ತದೆ. ಇದು ಒಂದು ದೊಡ್ಡ ಪರಿಶ್ರಮ. ಇದರಿಂದ ಒಳ್ಳೆಯ ಫಲ ಲಭಿಸುತ್ತದೆ ಎಂದರು.


ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ, ಶಿಕ್ಷಣದ ಮೂಲಕ ಕಲಿತ ಸಮಗ್ರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಭಗವಾನ್ ಬಾಬಾ ಅವರ ಮಹತ್ವದ ಸಂಕಲ್ಪವು ಮಾನವೀಯತೆಯ ಉದ್ಧಾರ. ಈ ನಿಟ್ಟಿನಲ್ಲಿ ಸತ್ಯಸಾಯಿ ಸಂಸ್ಥೆಯ ವಿಶ್ವವಿದ್ಯಾಲಯ ಕಾರ್ಯಪ್ರವೃತ್ತವಾಗಿವೆ ಎಂದರು.


ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಮಾರ್ಗದರ್ಶಿ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸತ್ಯ ಸಾಯಿ ವಿಶ್ವವಿದ್ಯಾಲಯವು ಆಧ್ಯಾತ್ಮಿಕ ಉನ್ನತಿ ಕೇಂದ್ರವಾಗಿದ್ದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಭಾರತದ ಪ್ರಾಚೀನ ಗುರುಕುಲ ಪದ್ಧತಿ ಆಧಾರಿತ, ಮೌಲ್ಯ ಕೇಂದ್ರಿತ, ಸಂಘಟಿತ ಶಿಕ್ಷಣ, ಮನೆಯ ವಾತಾವರಣದಲ್ಲಿ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ಉಪ ಕುಲಪತಿ ಪ್ರೊ ಶಶಿಧರ್, ಮುಖಂಡರಾದ ಪದ್ಮ ಸುಬ್ರಮಣ್ಯಂ, ರೇವತಿ ರಾಮಚಂದ್ರನ್, ವಿಪಿನ್ ಕುಮಾರ್, ಪ್ರೊ.ರಾಮಚಂದ್ರ ಜಿ.ಭಟ್, ಜಯರಾಮರೆಡ್ಡಿ, ಸಂಜಯ ದ್ವಿವೇದಿ, ರಾಕೇಶ್ ಉಪಾಧ್ಯಯ, ಡಾ.ಸುಬ್ರಮಣ್ಯಂ, ಡಾ.ಜಿ.ಎ.ಹೇಮಂತ್ ಕುಮಾರ್, ಡಾ ವಿದ್ಯಾಶಂಕರ್, ಪ್ರೊ.ವೀರಭದ್ರಪ್ಪ, ಡಾ.ಗೋಪಾಲಕೃಷ್ಣ ಜೋಷಿ, ಡಾ ರಾಜೇಶ್ ನೇತಾನಿ, ಡಾ ನಾಗೇಶ್ ಮತ್ತಿತರರು ಇದ್ದರು.


ಗೌರವ ಡಾಕ್ಟರೇಟ್ ಪ್ರದಾನ: ಖ್ಯಾತ ಪರಮಾಣು ಭೌತಶಾಸ್ತ್ರಜ್ಞ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಆರ್.ಚಿದಂಬರಂ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಪದ್ಮಪ್ರಶಸ್ತಿ ಪುರಸ್ಕೃತ ಎಂ.ವೆಂಕಟೇಶ್ ಕುಮಾರ್, ಅಸ್ಸಾಂನ ಖ್ಯಾತ ಪರಿಸರವಾದಿ ಪೂರ್ಣಿಮಾ ದೇವಿ ಬರ್ಮನ್, ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸಿ.ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು