ಚಿಕ್ಕಬಳ್ಳಾಪುರ: ಒಂದೆಡೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಹಾಗೆಯೇ ನಿಯಮ ಪಾಲನೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದರೂ ಮಾರಕ ಉತ್ಪನ್ನಗಳ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಪ್ಲಾಸ್ಟಿಕ್ ನಿಷೇಧ ಎನ್ನುವುದು ಕೇವಲ ಆದೇಶಕ್ಕೆ ಸೀಮಿತವಾಗಿದೆ. ಆಡಳಿತ ಯಂತ್ರಾಂಗಕ್ಕೆ ಪ್ರಚಾರ, ಅನೇಕರ ಜನರಲ್ಲಿ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ತಾತ್ಸರ ಮನೋಭಾವನೆಯು ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಸೇರಿದಂತೆ ಥರ್ಮಾಕೋಲ್ ಮತ್ತು ವಿಸ್ತರಿಸಿದ ಪಾಲಿಸ್ಪೆರೀನ್ ಸೇರಿ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು ಜು.1ರಿಂದ ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಹೊರಡಿಸಿದೆ. ಈ ಹಿಂದೆ ಹೊರಡಿಸಿರುವ ಆದೇಶಗಳೇನು ಕಡಿಮೆ ಇಲ್ಲ. ಈಗಲೂ ಅಕ್ರಮ ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಇನ್ನು ರಾಜಾರೋಷವಾಗಿ ಬಳಕೆಯ ದೃಶ್ಯಗಳು ವ್ಯಾಪಕವಾಗಿ ಕಂಡು ಬರುತ್ತವೆ.
ಪ್ರವಾಸಿ ತಾಣದಲ್ಲಿ ಕಡಿವಾಣ: ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮಾತ್ರ ಸಾಮಾನ್ಯವಾಗಿ ಎಲ್ಲರ ಚಿತ್ತ ಪ್ಲಾಸ್ಟಿಕ್ ಹಾವಳಿ ಸಮಸ್ಯೆಯತ್ತ ಹರಿಯುತ್ತದೆ. ಕೆಲ ದಿನ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ದಾಸ್ತಾನು ಉತ್ಪನ್ನ ವಶಪಡಿಸಿಕೊಂಡು ನಿಯಮ ಉಲ್ಲಂಸಿದ ಮಾಲೀಕರಿಗೆ ದಂಡ ವಿಧಿಸುತ್ತಾರೆ. ಬಳಿಕ ಎಂದಿನಂತೆ ಮತ್ತೆ ಸಮಸ್ಯೆಯು ಮುಂದುವರೆಯುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಂದಿ ಗಿರಿಧಾಮ ಸೇರಿ ಪ್ರವಾಸಿ ತಾಣಗಳಲ್ಲಿ ಕಡಿವಾಣ ಹಾಕಿರುವುದು ಖುಷಿಯ ವಿಚಾರವಷ್ಟೇ. ಇಲ್ಲಿನ ಪ್ರಾಕೃತಿಕ ಸೊಬಗಿನಿಂದ ಗಮನ ಸೆಳೆಯುವ ನಂದಿ ಗಿರಿಧಾಮಕ್ಕೆ ದೇಶ ವಿದೇಶಗಳಿಂದ ಪ್ರತಿನಿತ್ಯ ಆಗಮಿಸುವ ಪ್ರವಾಸಿಗರ ಹೆಚ್ಚಳಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ಬಳಕೆಯಾಗಿ ಪರಿಸರ ಮಾಲಿನ್ಯ ಉಂಟಾಗುವುದನ್ನರಿತು ನಿಷೇಧ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರಲ್ಲಿ ಸ್ವತಂತ್ರ್ಯ ಹೋರಾಟದ ಸ್ಥಳ ವಿದುರಾಶ್ವತ್ಥ ಪರವಾಗಿಲ್ಲ. ಉಳಿದಂತೆ ರಂಗಸ್ಥಳ, ಕೈವಾರ, ಆವಲಬೆಟ್ಟ, ಪಾಪ್ನಾ, ತಲಕಾಯಲಬೆಟ್ಟ, ಕೇತೇನೇಹಳ್ಳಿ ಫಾಲ್ಸ್ ಸೇರಿ ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ಲಾಸ್ಟಿಕ್ ರಾಶಿ ರಾಶಿ ರಾಜಿಸುತ್ತಿರುತ್ತದೆ.
ಹಲವು ಬಾರಿ ನಿಷೇಧ: ನಂದಿ ಗಿರಿಧಾಮದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎನ್.ಮಂಜುಳಾ, ದೀಪ್ತಿ ಆದಿತ್ಯ ಕಾನಡೆ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದರು. ಇನ್ನು ಅಂದಿನ ಡಿಸಿ ಅನಿರುದ್ಧ್ ಶ್ರವಣ್ ನಗರದಲ್ಲಿ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳ ಬಳಕೆ ಅಭಿಯಾನ ನಡೆಸಿದ್ದರು. ಇದರ ನಡುವೆ ದೇಶದಾದ್ಯಂತ ಮಾರಕ ಉತ್ಪನ್ನ ಬಳಕೆಗೆ ನಿಷೇಧ ಹೇರಲಾಗಿದೆ. ಜು.1ರಿಂದ ಮತ್ತಷ್ಟು ಕಠಿಣ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿದೆ.
ಬಿಗಿ ಕ್ರಮ ಜಾರಿ: ಪ್ಲಾಸ್ಟಿಕ್ ಕೈ ಚೀಲ, ತಟ್ಟೆ, ಲೋಟ, ಚಮಚ, ಫೋರ್ಕ್, ಊಟದ ಮೇಜಿನ ಮೇಲೆ ಹರಡುವ ಹಾಳೆ, ಥಮೋರ್ಕೋಲ್ ಮತ್ತು ಪ್ಲಾಸ್ಟಿಕ್ ಮೆಕ್ರೋ ಬೀಡ್ಸ್ನಿಂದ ನೀರಿನ ಹಾಗೂ ಪಾನೀಯ ಬಾಟಲ್ ಸೇರಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸುವಂತಿಲ್ಲ. ಎಲ್ಲಾದರೂ ಕಂಡು ಬಂದಲ್ಲಿ ನಿಷೇಧಿತ ಉತ್ಪನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಯಮ ಉಲ್ಲಂಸುವ ಪ್ರತಿ ಮನೆ ಮತ್ತು ವ್ಯಕ್ತಿಗೆ 500 ರೂ.ಗಳಿಂದ 1 ಲಕ್ಷದವರೆಗೂ ದಂಡ, ಮೊಕದ್ದಮೆ ಹೂಡಿ, 5 ವರ್ಷಗಳವರೆಗೂ ಜೈಲು ಶಿೆ ವಿಧಿಸಲಾಗುತ್ತದೆ.
ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ, ಉತ್ಪನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ವಿಚಾರದಲ್ಲೂ ಬಿಗಿ ಕ್ರಮ ಕೈಗೊಳ್ಳಲಾಗಿದೆ.
| ಮಹಾಂತೇಶ್ ಪೌರಾಯುಕ್ತ, ಚಿಕ್ಕಬಳ್ಳಾಪುರ
ಪ್ಲಾಸ್ಟಿಕ್ ನಿಷೇಧದ ವಿಚಾರವನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಮಾಣಿಕ ಬಿಗಿ ಕ್ರಮಗಳ ಮೂಲಕ ಕಡಿವಾಣ ಹಾಕಬೇಕು. ಆದರೆ,ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
| ಸುರೇಶ್ ಸ್ಥಳಿಯ ನಿವಾಸಿ