ಜಿಲ್ಲೆ

ಸದ್ಗುರು ಮಧುಸೂದನ ಸಾಯಿ ಜನ್ಮ ದಿನದ ಸಂಭ್ರಮ, ಭಕ್ತ ಸಮೂಹದ ಗ್ರಾಮಗಳ ಸೇವೆ


ಚಿಕ್ಕಬಳ್ಳಾಪುರ: ಮನೆ ಮನೆಗೂ ಭಕ್ತ ಸಮೂಹ ದಂಡು, ಅಕ್ಕರೆಯ ಪ್ರೀತಿಯ ಮಾತು, ಪ್ರೇಮ ಪ್ರಸಾದ ವಿತರಣೆ, ಸಂಭ್ರಮದ ದೃಶ್ಯಗಳು ಸದ್ಗುರು ಶ್ರೀ ಮಧುಸೂದನ ಸಾಯಿ ಜನ್ಮ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಕೈಗೊಂಡಿದ್ದ ಗ್ರಾಮ ಸೇವೆಯಲ್ಲಿ ಕಂಡು ಬಂದವು. ಸತ್ಯಸಾಯಿ ಲೋಕಸೇವಾ ಸಂಸ್ಥೆಯ ನೇತೃತ್ವದಲ್ಲಿ 850 ಮಂದಿ ವಿದ್ಯಾರ್ಥಿಗಳು, 150 ಮಂದಿ ಶಿಕ್ಷಕರು, ಸ್ವಯಂ ಸೇವಾ ಭಕ್ತರನ್ನೊಳಗೊಂಡ ತಂಡವು ಮುದ್ದೇನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಿಗೆ ತೆರಳಿ ಪ್ರೇಮ ಪ್ರಸಾದವನ್ನು ಹಂಚಿದರು. ಗ್ರಾಮ ಗ್ರಾಮಗಳಲ್ಲಿಯೂ ಸದ್ಗುರುವಿನ ಜಯಕಾರದ ಘೋಷಣೆಗಳು ಮೊಳಗಿದವು. ವಿವಿಧ ಸೇವಾ ಚಟುವಟಿಕೆಯು ಗಮನ ಸೆಳೆದವು. ತಾಲೂಕಿನ ಮುದ್ದೇನಹಳ್ಳಿಯಲ್ಲಿ ಸದ್ಗುರುಗಳು ಭೂಮಾತೆಗೆ ಕಲ್ಪವೃಕ್ಷ ಫಲವನ್ನು ಅರ್ಪಿಸುವುದರ ಮೂಲಕ ಗ್ರಾಮ ಸೇವೆಗೆ ಚಾಲನೆ ನೀಡಿದರು. ಇದರೊಂದಿಗೆ ಗ್ರಾಮದ ವಿವಿಧ ಭಾಗಗಳಿಗೆ ಭಕ್ತ ಸಮೂಹ ಬಾಬಾ ಸಂದೇಶವನ್ನು ಪಸರಿಸುವ ಸಂಚಾರದೊಂದಿಗೆ ಸಿಹಿ ವಿತರಿಸಿದರು.
ಜಾಗತಿಕ ಮಾನವ ಸೇವಾ ಅಭಿಯಾನದ ಮೂಲಕ ಉಚಿತ ವೈದ್ಯ, ವಿದ್ಯೆ ಮತ್ತು ಪೌಷ್ಟಿಕ ಆಹಾರವನ್ನು ಜಗತ್ತಿನಾದ್ಯಂತ ಒದಗಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಸದ್ಗುರುವಿಗೆ ಅರ್ಥಪೂರ್ಣ, ಸಾರ್ಥಕ ಶುಭ ಸಂದೇಶವನ್ನು ಸಾರುವ ನಿಟ್ಟಿನಲ್ಲಿ 34 ಗ್ರಾಮಗಳಲ್ಲಿ ಸೇವಾ ಚಟುವಟಿಕೆಯನ್ನು ಕೈಗೊಳ್ಳಲಾಯಿತು. ಜಗತ್ತಿಗೆ ನಿಸ್ವಾರ್ಥ ಸೇವೆಯ ರೂಪದಲ್ಲಿ ಮಾನವನಿಗೆ ಅಗತ್ಯವಾಗಿ ಸಲ್ಲಬೇಕಾದ ವೈದ್ಯ, ವಿದ್ಯೆ ಮತ್ತು ಜಲದ ಅವಶ್ಯಕತೆಯನ್ನು ಉಚಿತವಾಗಿ ನೀಡಿ ಪ್ರಪಂಚಕ್ಕೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಮಾದರಿ ಎನಿಸಿದ್ದು ಇವರ ಸಮರ್ಥ ಉತ್ತರಾಧಿಕಾರಿ ಸದ್ಗುರು ಶ್ರೀ ಮಧುಸೂದನ ಸಾಯಿ ಸಹ ಗುರುಗಳ ಜಾಡಿನಲ್ಲಿ ಸಾಗುತ್ತಿದ್ದಾರೆ. ಮೂಲ ಸೌಕರ್ಯಗಳು ಪ್ರತಿಯೊಬ್ಬರಿಗೂ ಸಹ ಉಚಿತವಾಗಿ ದೊರೆಯಬೇಕೆಂದು ಪ್ರತಿಪಾದಿಸಿದ ಮಾನವೀಯತೆಯ ಸಂತ. ಜನ್ಮ ದಿನದ ಉತ್ಸವದ ಮೂಲಕ ಅನುಯಾಯಿಗಳಿಗೆ ಆದರ್ಶದ ಪಾಠವನ್ನು ಪ್ರೇಮ ಸಂದೇಶದ ಮೂಲಕ ಗ್ರಾಮ ಗ್ರಾಮಗಳಲ್ಲೂ ಬೋಧಿಸಲಾಯಿತು. ಪ್ರತಿ ವರ್ಷದಂತೆ ಶಿಕ್ಷಕರು, ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಸ್ಥಳೀಯರು ಆತ್ಮೀಯವಾಗಿ ಬರ ಮಾಡಿಕೊಂಡರು. ಗ್ರಾಮಗಳಲ್ಲಿನ 6000 ಮನೆಗಳ 28 ಸಾವಿರ ಜನರಿಗೆ ಸದ್ಗುರುಗಳ ಪ್ರೇಮ ಪ್ರಸಾದವನ್ನು ತಲುಪಿಸಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

*ಆಕರ್ಷಕ ಕಾರ್ಯಕ್ರಮ*
ಮುದ್ದೇನಹಳ್ಳಿಯ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಸಾಯಿ ಸಿಂಫನಿ ಹಾಗೂ ಸಂಗೀತ ಸ್ವರಮೇಳ ಕಾರ್ಯಕ್ರಮವು ನಡೆಯಿತು. ಜಾಗತಿಕ ಮಟ್ಟದ ಖ್ಯಾತ ಕಲಾ ತಂಡವು ವಾದ್ಯಗಳನ್ನು ನುಡಿಸುವುದರ ಜತೆಗೆ ವಿವಿಧ ಹಾಡುಗಳ ಗಾಯನದ ಮೂಲಕ ರಸದೌತಣವನ್ನು ಉಣಬಡಿಸಿದವು.