ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದಲ್ಲಿ 9 ತಿಂಗಳ ತುಂಬು ಗರ್ಭಿಣಿಯನ್ನ ಭಾವನೊರ್ವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಜ್ಯೋತಿ(26) ಕೊಲೆಯಾದ ಮಹಿಳೆ. 40 ವರ್ಷದ ಹರೀಶ್ ಬಾಬು ಕೊಲೆ ಮಾಡಿದ ಪಾಪಿ. ಒಂದೇ ಮನೆಯಲ್ಲಿ ಜ್ಯೋತಿ ಹಾಗೂ ಈಕೆಯ ಗಂಡ ಅತ್ತೆ-ಮಾವ ಸೇರಿದಂತೆ ಆರೋಪಿ ಭಾವನೂ ವಾಸವಿದ್ದ. ಜ್ಯೋತಿಯ ಗಂಡ ಮಗಳ ಮನೆಗೆ ಚಿಂತಾಮಣಿಗೆ ಹೋಗಿದ್ದ ತಾಯಿಯನ್ನು ಕರೆ ತರೋಕೆಂದು ಹೋಗಿದ್ದ. ಇದೇ ವೇಳೆ ಮಾವ ತೋಟದ ಮನೆ ಬಳಿ ಇದ್ದರು ಎನ್ನಲಾಗಿದೆ.
ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಜ್ಯೋತಿ ಜತೆ ವಿನಾಕಾರಣ ನನಗೆ ಬಟ್ಟೆ ಒಗೆದುಕೊಡಲ್ಲ. ಸರಿಯಾಗಿ ನೋಡಿಕೊಳ್ಳಲ್ಲ ಎಂದು ತಗಾದೆ ತೆಗೆದಿರೋ ಪಾಪಿ ಹರೀಶ್ ಬಾಬು ತುಂಬು ಗರ್ಭಿಣಿ ಎಂದು ನೋಡದೇ ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನು ನೋಡೊಕೆ ಅಂತ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೊನೆಯುಸಿರಿನಲ್ಲಿ ವಿಲ ವಿಲ ಒದ್ದಾಡುತ್ತಿದ್ಲಂತೆ. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತಂದರೂ, ಅಷ್ಟರಲ್ಲೇ ಜ್ಯೋತಿ ಕೊನೆಯುಸಿರುಳೆದಿದ್ದಾಳೆ.
ಜ್ಯೋತಿ ಗಂಡ ರೈಲ್ವೈ ಇಲಾಖೆ ಉದ್ಯೋಗಿಯಾಗಿದ್ದು, 8 ವರ್ಷಗಳ ನಂತರ ಮಗು ಆಗುತ್ತಿದ್ದ ಸಂತಸದಲ್ಲಿ ಮನೆ ಮಂದಿಯೆಲ್ಲಾ ಇದ್ದರು. ಇನ್ನೂ 10-12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ರಂತೆ. ಚಿಂತಾಮಣಿಗೆ ಹೋಗಿದ್ದ ಗಂಡ ಸಹ ತನಗೆ ಸೀಮಂತಕ್ಕೆ ತರುವುದಾಗಿ ಹೇಳಿ ಹೋಗಿದ್ನಂತೆ. ಆದರೆ, ಅಷ್ಟರಲ್ಲೇ ಭಾವ ನಾದಿನಿಯ ಪ್ರಾಣವನ್ನು ಬಲಿ ಪಡೆದುಬಿಟ್ಟಿದ್ದಾನೆ. ಸದ್ಯ ಪಾಪಿ ಭಾವ ಹರೀಶ್ ಬಾಬು ನನ್ನ ದಿಬ್ಬೂರಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. (ದಿಗ್ವಿಜಯ ನ್ಯೂಸ್)