ಜಿಲ್ಲೆ

ಬೈಕ್ ವ್ಹೀಲಿಂಗ್, ಕರ್ಕಶ ಧ್ವನಿ ಮಾಡುತ್ತಿದ್ದ ವಾಹನ ಸವಾರರಿಗೆ ಪಾಠ ಕಲಿಸಿದ ಪೊಲೀಸರು

ಚಿಕ್ಕಬಳ್ಳಾಪುರ: ಬೈಕ್ ವ್ಹೀಲಿಂಗ್ ಮಾಡುತ್ತ ಕರ್ಕಶ ಧ್ವನಿಯಲ್ಲಿ ಸಾಗುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಪಾಠ ಕಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಬೈಕ್ ಸೈಲೆನ್ಸರ್ ಗಳನ್ನು ನಾಶಪಡಿಸಿದ್ದಾರೆ. ಮುಂಬರುವ ದಿನಗಳಲ್ಲೂ ನಿರಂತರ ಕಾರ್ಯಾಚರಣೆ ಕೈಗೊಂಡು ಬೈಕ್ ಪುಂಡರಿಗೆ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸುರಕ್ಷತೆಯ ವಾಹನ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ.ಖಾಸಿಂ, ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತಿತರರು ಇದ್ದರು.

*ಬೈಕ್ ಪುಂಡರ ಹಾವಳಿ*
ಇತ್ತೀಚೆಗೆ ಜಿಲ್ಲೆಯಲ್ಲಿ ಬೈಕ್ ಪುಂಡರ ಹಾವಳಿ ಹೆಚ್ಚಾಗಿದೆ. ಸದಾ ವಾಹನ ಸಂಚಾರ ದಟ್ಟಣೆಯ ರಾಷ್ಟ್ರೀಯ ಹೆದ್ದಾರಿ, ಪ್ರಮುಖ ಪ್ರವಾಸಿತಾಣಗಳ ಮಾರ್ಗದ ರಸ್ತೆಗಳಲ್ಲಿ ಅತಿ ವೇಗದ ಚಾಲನೆಯೊಂದಿಗೆ ಬೈಕ್ ವ್ಹೀಲಿಂಗ್, ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ‌. ಅದರಲ್ಲೂ ನಂದಿ ಗಿರಿಧಾಮ, ನಂದಿ, ಹಾರೋಬಂಡೆ ಸರ್ವೀಸ್ ರಸ್ತೆ ಸೇರಿದಂತೆ ವಿವಿಧೆಡೆ ಅಪಾಯಕಾರಿ ವಾಹನ ಚಾಲನೆಯ ಸಾಹಸ ಪ್ರದರ್ಶನದ ದೃಶ್ಯಗಳು ಕಂಡು ಬರುತ್ತಿರುತ್ತವೆ. ಹಿಂದೆ ಪ್ರೇಯಸಿಯನ್ನು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪುಂಡ ಯುವನಕೊಬ್ಬ ವಾಹನ ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೀಡಗಾನಹಳ್ಳಿ, ಆವಲಗುರ್ಕಿ, ನಂದಿ, ಕಣಿವೆನಾರಾಯಣಪುರ ಬಳಿ ಬೈಕ್ ವ್ಹೀಲಿಂಗ್ ಮಾಡಿ, ಸವಾರರು ಗಾಯಗೊಂಡ ಪ್ರಕರಣಗಳು ವರದಿಯಾಗಿದ್ದವು.


*ಠಾಣೆಗಳಲ್ಲಿ ಪ್ರಕರಣ ದಾಖಲು*
ವಾರಾಂತ್ಯದ ರಜೆ ದಿನಗಳ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾಲು ಸಾಲು ಬೈಕುಗಳು ಕರ್ಕಶ ಧ್ವನಿಯೊಂದಿಗೆ ವ್ಹೀಲಿಂಗ್ ಮಾಡುತ್ತ ಸಾಗುತ್ತಿದ್ದು ಅಪಘಾತಗಳು ಸಂಭವಿಸುತ್ತಿರುವುದರ ಜತೆಗೆ ಸ್ಥಳೀಯರು ಕಿರಿಕರಿ ಅನುಭವಿಸುವಂತಾಗಿದೆ. ಇದರ ಬಗೆಗಿನ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ನಂದಿ ಗಿರಿಧಾಮದ ತಪ್ಪಲಿನಲ್ಲಿ ಬೈಕ್ ವ್ಹೀಲಿಂಗ್ ಮಾಡಿದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ಆದರೂ ಪುಂಡರ ಹಾವಳಿ ಮಾತ್ರ ನಿಂತಿಲ್ಲ. ದಂಡ ಪಾವತಿಸಿ, ಮತ್ತೆ ಅಸಡ್ಡೆ ಧೋರಣೆ ಪ್ರದರ್ಶಿಸುವುದು ಸಾಮಾನ್ಯವಾಗಿದೆ.