ಚಿಕ್ಕಬಳ್ಳಾಪುರ : ಆಡಳಿತ ಮತ್ತು ವಿಪಕ್ಷದ ಸದಸ್ಯರ ಗದ್ದಲದ ನಡುವೆ ಇಲ್ಲಿನ ನಗರಸಭೆಯಲ್ಲಿ 1.29 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ. ನಾನಾ ಮೂಲಗಳಿಂದ 55,42,70,000 ರೂ., ಜಮಾ ಆಗುವ ನಿರೀಕ್ಷೆ ಹೊಂದಿದ್ದು ಇದರಲ್ಲಿ ವಿವಿಧ ಕೆಲಸಗಳಿಗೆ 54,12,82,000 ರೂ. ಖರ್ಚಿನ ಲೆಕ್ಕ ತೋರಿಸಲಾಗಿದೆ.
ನಗರಸಭೆ ಕಚೇರಿಯ ಸರ್ ಎಂ.ವಿ.ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ನಡೆದಿದ್ದು, 1,29,88,000 ರೂ. ಉಳಿತಾಯದ ಆಯವ್ಯಯ ಮಂಡಿಸಲಾಗಿದೆ.
ಎಲ್ಲೆಡೆ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಬಹುತೇಕ ಆದಾಯಕ್ಕೆ ಖೋತಾ ಬಿದ್ದಿರುವುದರ ಜತೆಗೆ ಹೊರೆ ಹೆಚ್ಚಾಗಿದ್ದು, ಸಮರ್ಥವಾಗಿ ನಿಭಾಯಿಸುತ್ತಿರುವ ಜತೆಗೆ ಮುಂಬರುವ ದಿನಗಳಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ವಾರ್ಡ್‌ಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ನಿರ್ವಹಣೆ, ಜನರಿಗೆ ಸಮರ್ಪಕವಾಗಿ ಸವಲತ್ತು ಒದಗಿಸುವಿಕೆ ಸೇರಿ ನಗರದ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದು ಅಧ್ಯಕ್ಷ ಆನಂದರೆಡ್ಡಿ ಬಾಬು ತಿಳಿಸಿದರು. ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು, ಪೌರಾಯುಕ್ತ ಡಿ.ಲೋಹಿತ್ ಮತ್ತಿತರರು ಇದ್ದರು.
ಆದಾಯದ ಮೂಲ : ರಾಜಸ್ವ ತೆರಿಗೆಯಿಂದ 5.33 ಕೋಟಿ ರೂ., ವಹಿಸಿದ ರಾಜಸ್ವ ಮತ್ತು ಪರಿಹಾರದಡಿ 20 ಲಕ್ಷ ರೂ., ಮುನಿಸಿಪಲ್ ಆಸ್ತಿಗಳ ಬಾಡಿಗೆಯಿಂದ 80 ಲಕ್ಷ ರೂ., ಅನುದಾನ ಮತ್ತು ವಂತಿಕೆಗಳಿಂದ 12 ಕೋಟಿ ರೂ., ನಿರ್ದಿಷ್ಟ ಉದ್ದೇಶಕ್ಕಾಗಿ 21.55 ಕೋಟಿ ರೂ., ಇತರ ಹೊಣೆಗಾರಿಕೆ 3.90 ಕೋಟಿ ರೂ, ಫೀಸು ಮತ್ತು ಬಳಕೆ ಸೇರಿ ಇತರ ವೆಚ್ಚ 5.71 ಕೋಟಿ ರೂ., ಬಡ್ಡಿ ಮತ್ತು ಡಿವಿಡೆಂಡ್‌ಗಳಿಂದ 1.18 ಕೋಟಿ ರೂ., ಮೀಸಲಿಟ್ಟ ನಿಧಿಗೆ ವರ್ಗಾಯಿಸಲಾದ ಹಣ 2.06 ಕೋಟಿ ರೂ., ಸ್ವೀಕೃತಿ ಠೇವಣಿ 65 ಲಕ್ಷ ರೂ., ಸೇರಿ 55.42 ಕೋಟಿ ರೂ., ಆದಾಯದ ನಿರೀಕ್ಷೆ ಹೊಂದಲಾಗಿದೆ.
ಹಣ ಖರ್ಚಿನ ನಿರೀಕ್ಷೆ : ಸಾಮಾನ್ಯ ವೆಚ್ಚ 1.84 ಕೋಟಿ ರೂ., ಮಾನವ ಸಂಪನ್ಮೂಲ ವೆಚ್ಚ 6.38 ಕೋಟಿ ರೂ., ಕಾರ್ಯ ಮತ್ತು ನಿರ್ವಹಣೆಗೆ 11.78 ಕೋಟಿ ರೂ., ಕಾರ್ಯಕ್ರಮ ವೆಚ್ಚ 1.68 ಕೋಟಿ ರೂ., ಸ್ಥಿರಾಸ್ತಿಗಳ ನಿರ್ಮಾಣ 24.51 ಕೋಟಿ ರೂ., ಇತರ ಜವಾಬ್ದಾರಿಗಳ ಪಾವತಿ 3.20 ಕೋಟಿ ರೂ., ದಾಸ್ತಾನುಗಳ ಖರೀದಿ 98 ಲಕ್ಷ ರೂ., ಠೇವಣಿಗಳ ಮರುಪಾವತಿ 72.20 ಲಕ್ಷ ರೂ., ಸೇರಿ 54.12 ಕೋಟಿ ರೂ., ಖರ್ಚಿನ ಆಯವ್ಯಯ ನೀಡಲಾಗಿದೆ.
ಸ್ವಲ್ಪ ಕಾಮನ್ ಸೆನ್ಸ್ ಇಲ್ವಾ? : ಬಜೆಟ್ ಮಂಡನೆ ಸಭೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ವಾಗ್ವಾದ, ಗದ್ದಲಕ್ಕೆ ಸಾಕ್ಷಿಯಾಯಿತು. ಮುನಿಪಲ್ ಆಸ್ತಿಗಳ ರಕ್ಷಣೆ, ಅಕ್ರಮ ಒತ್ತುವರಿ ತೆರವುಗೊಳಿಸಿ ಅಧೀನಕ್ಕೆ ಪಡೆದುಕೊಳ್ಳಬೇಕು. ಹಾಗೆಯೇ ಹೆಚ್ಚಿನ ಕಂದಾಯ ಸಂಗ್ರಹದ ಗುರಿ ಸಾಧನೆಯಾಗಬೇಕು. ಆದರೆ ನಾನಾ ಕಾರಣಗಳಿಂದಾಗಿ ಆದಾಯ ಸೋರಿಕೆಯಾಗುತ್ತಿದೆ ಎಂದು ಅಂಬರೀಷ್, ನರಸಿಂಹಮೂರ್ತಿ ಸೇರಿ ವಿಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ದೂರು ಹೇಳಬೇಕಾದರೂ ದಾಖಲೆ ಸಮೇತ ಗಮನಕ್ಕೆ ತರಬೇಕು. ಇದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದು ಆಡಳಿತ ಪಕ್ಷದ ಗಜೇಂದ್ರ, ನಾಗರಾಜ್ ತಿರುಗೇಟು ನೀಡುತ್ತಿದ್ದಂತೆ ಸದಸ್ಯರ ನಡುವಿನ ವಾಕ್ಸಮರ ಶುರವಾಯಿತು. ಪ್ರತಿ ಬಾರಿ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದಾಗಲೆಲ್ಲ ಅಡ್ಡ ಬಂದು ದಿಕ್ಕು ತಪ್ಪಿಸಲಾಗುತ್ತಿದೆ. ಸ್ವಲ್ಪ ಕಾಮನ್ ಸೆನ್ಸ್ ಇಲ್ವಾ? ಎಂದು ವಿಪಕ್ಷ ಸದಸ್ಯರು ಪ್ರಶ್ನಿಸುತ್ತಿದ್ದಂತೆ ಗದ್ದಲ ವಿಕೋಪಕ್ಕೆ ತಿರುಗಿತು. ಒಂದು ಹಂತದಲ್ಲಿ ಗಜೇಂದ್ರ ಬನ್ನಿ ನಿಮ್ಮನ್ನು ನೋಡಿಕೊಳ್ಳುತ್ತೀವಿ ಎಂದು ಸವಾಲೆಸೆಯುತ್ತಿದ್ದಂತೆ ಮತ್ತಷ್ಟು ಜೋರು ಪಡೆಯಿತು. ಇದೇ ವೇಳೆ ಪರಸ್ಪರ ಕ್ಷಮಾಯಾಚನೆಯ ಕೂಗು ಕೇಳಿ ಬಂತಾದರೂ ಕೊನೆಗೆ ಅಧ್ಯಕ್ಷರು ಎಲ್ಲರನ್ನು ಸಮಾಧಾನಪಡಿಸಿದರು.
ಅನುದಾನ ಕೊಡಿ, ಸಮಸ್ಯೆ ಬಗೆಹರಿಸಿ : ಸಭೆಯಲ್ಲಿ ವಾರ್ಡ್‌ವಾರು ಸದಸ್ಯರು ಅಹವಾಲುಗಳನ್ನು ಹೇಳಿಕೊಂಡರು. ಜತೆಗೆ ಹೆಚ್ಚಿನ ಅನುದಾನ ನೀಡುವುದರ ಜತೆಗೆ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿದರು. ಹದಗೆಟ್ಟಿರುವ ಬೀದಿದೀಪ, ಗುಂಡಿ ಬಿದ್ದಿರುವ ರಸ್ತೆಗಳು, ಅವೈಜ್ಞಾನಿಕ ಚರಂಡಿ, ಕೊಳೆಗೇರಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಬಗ್ಗೆ ಕಣಿತಹಳ್ಳಿ ವೆಂಕಟೇಶ್ ನೇತ್ರಾವತಿ, ಜಯಲಕ್ಷ್ಮೀ, ನಿರ್ಮಲ ಪ್ರಭು, ಅಂಬಿಕಾ, ರುಕ್ಮಿಣಿ ಗಮನ ಸೆಳೆದರು.