ಚಿಕ್ಕಬಳ್ಳಾಪುರ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಪ್ರಚಾರದ ಜತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಅವಲೋಕನದಲ್ಲಿ ಬಿಜೆಪಿ ತೊಡಗಿದೆ.
ಈಗಾಗಲೇ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನೊಳಗೊಂಡ ಅವಲೋಕನ ಸಭೆಯನ್ನು ನಡೆಸಿದ ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್, ಚುನಾವಣೆಯಲ್ಲಿ ಮತ ಗಳಿಕೆ, ಇಳಿಕೆ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಉಳಿದ ಕ್ಷೇತ್ರಗಳಾದ ಹೊಸಕೋಟೆ, ದೊಡ್ಡಬಳ್ಳಾಪುರ, ಯಲಹಂಕ, ಗೌರಿಬಿದನೂರಿನಲ್ಲೂ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆಯಲಿದೆ.
*ಸಕಾರಾತ್ಮಕ ಪ್ರತಿಕ್ರಿಯೆ
ಬಿಜೆಪಿಯ ಪ್ರತಿ ಅವಲೋಕನ ಸಭೆಯಲ್ಲಿ ಸ್ವಪಕ್ಷೀಯ ಮುಖಂಡರು ಮತ್ತು ಪದಾಧಿಕಾರಿಗಳು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗೆಲುವಿಗೆ ಪೂರಕವಾದ ವಾತಾವರಣ ಇದೆ. ಇದರಿಂದ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ.
ಕ್ಷೇತ್ರಗಳಲ್ಲಿ ನಾಯಕರ ವ್ಯಾಪ್ತಿಯಲ್ಲಿ ಕಾರ್ಯ ವೈಖರಿ, ಮತದಾನದ ಪ್ರಮಾಣ, ಪಕ್ಷ ಗಳಿಕೆ, ಎದುರಾಳಿಗಳ ಕಸರತ್ತು, ಸಕಾರಾತ್ಮಕ ಮತ್ತು ನಕರಾತ್ಮಕ ಅಂಶಗಳ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇದು ಖುಷಿಯ ವಿಚಾರ ಎಂದು ಡಾ ಕೆ.ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.
*ಪಕ್ಷಗಳ ಲೀಡ್ ಲೆಕ್ಕಾಚಾರ
ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಡುವೆಯೇ ನೇರ ಹಣಾಹಣಿ ನಡೆದಿದೆ. ಎರಡೂ ಕಡೆಯೂ ಗೆಲುವಿನ ವಿಶ್ವಾಸದ ಜಪ ಮಾಡಲಾಗುತ್ತಿದೆ.
ಮತದಾನ ಅವಧಿ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರವಾರು ಲೀಡ್ ಗಳಿಕೆಯ ವಿಚಾರವಾಗಿ ಮಾಹಿತಿ ಕಲೆ ಹಾಕಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿರುವುದರ ನಡುವೆ ಸಾಧಕ ಬಾಧಕಗಳ ಒಂದೊಂದೇ ವಿಚಾರಗಳು ಹೊರಗಡೆ ಬರುತ್ತಿದ್ದು ಸಹಜವಾಗಿ ಸೋಲು ಗೆಲುವಿನ ಬಗ್ಗೆ ಕುತೂಹಲ, ಆತಂಕ ಏರುಪೇರಾಗುತ್ತಿದೆ.
ಮೊದಲು ಮತಗಟ್ಟೆಯಲ್ಲಿ ಮತದಾನಕ್ಕೆ ಮತದಾರರ ಸ್ಪಂದನೆಯನ್ನಾಧಾರಿಸಿದ ಕೇಳಿ ಬರುತ್ತಿದ್ದ ತೃಪ್ತಿದಾಯಕ ಮಾತುಗಳು ಅದಲು ಬದಲಾಗಿದ್ದು ಬೂತ್ ಮಟ್ಟದಲ್ಲಿ ಕೊನೆ ಕ್ಷಣದಲ್ಲಾದ ಬೆಳವಣಿಗೆಗಳು, ತಂತ್ರಗಾರಿಕೆಯ ಫಲ, ನಾಯಕರ ನಿಲುವು ಮತ್ತು ಕೆಲಸ, ಜನರಿಂದ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಗಳು ಹೊಸ ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ.
*ಫಲಿತಾಂಶದ ಪ್ರಮುಖ ಚರ್ಚೆ
ಚಿಲ್ಲರೆ ಅಂಗಡಿ, ಹೋಟೆಲ್ ಸೇರಿದಂತೆ ವಿವಿಧ ಪ್ರದೇಶಗಳು, ಸಾಮಾಜಿಕ ಜಾಲತಾಣಗಳಲ್ಲೂ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆಯೇ ಚರ್ಚೆಯಾಗುತ್ತಿದೆ.
ಯಾವ ಅಭ್ಯರ್ಥಿಗೆ ಗೆಲುವು?, ಯಾವ ಅಭ್ಯರ್ಥಿಗೆ ಸೋಲು?, ಪಕ್ಷಗಳ ವೋಟ್ ಬ್ಯಾಂಕ್ ಕೆಲಸ ಮಾಡಿದೆಯೇ?, ಜನರು ವ್ಯಕ್ತಪಡಿಸಿದ ಒಲವಿನ ವಿಶ್ಲೇಷಣೆ ನಡೆಯುತ್ತಿದೆ. ಇದರ ಜತೆಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪಕ್ಷಗಳು ಗಳಿಸುವ ಸ್ಥಾನಗಳ ಗಳಿಕೆಯೇ ಪ್ರಮುಖ ವಿಚಾರಗಳು.