ಜಿಲ್ಲೆ

ಮೇಲುಗೈ ಸಾಧಿಸಿದ ಸಂಸದ ಸುಧಾಕರ್ ಬಣ, ಕಾಂಗ್ರೆಸ್ ಶಾಸಕರಿಗೆ ತಪ್ಪದ ಮುಖಭಂಗ

ಚಿಕ್ಕಬಳ್ಳಾಪುರ:ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ  ಗಂಗರೆಕಾಲುವೆ ಪ್ರಸಾದ್ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕಾಳೇಗೌಡ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಇದರಲ್ಲಿ ಅಧ್ಯಕ್ಷರಾಗಿ ಪ್ರಸಾದ್  ಅವಿರೋಧ ಆಯ್ಕೆಯಾದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ  ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ರಾಜ್ಯದಲ್ಲಿಯೇ ಅತ್ತುತ್ತಮವಾಗಿ ನಡೆಯುತ್ತಿರುವ ಪ್ರತಿಷ್ಟಿತ ಭೂ ಅಭಿವೃದ್ದಿ ಬ್ಯಾಂಕ್‌ಗಳ ಪೈಕಿ ಚಿಕ್ಕಬಳ್ಳಾಪುರ ಪಿಎಲ್‌ಡಿ ಒಂದಾಗಿದ್ದು ಇಲ್ಲಿ ಭ್ರಷ್ಟಾಚಾರ ರಹಿತವಾಗಿ ಕಾರ್ಯಭಾರ ನಡೆಸಬೇಕು. ಉತ್ತಮ ಸೇವೆಯನ್ನು ಸಲ್ಲಿಸಬೇಕು ಎಂದು ಸಲಹೆ ನೀಡಿದರು
ನಿರಂತರ ಪ್ರಯತ್ನದಿಂದ ನೂತನ ಕಟ್ಟಡ ತಲೆ ಎತ್ತಿದೆ.  ಇದರ ಬಾಡಿಗೆಯಿಂದ ವರ್ಷಕ್ಕೆ ಕನಿಷ್ಠ ನಲವತ್ತು ಲಕ್ಷ ರೂ ಆದಾಯ ತಂದುಕೊಡುತ್ತಿದೆ ಎಂದರು.
ನೂತನ ಅಧ್ಯಕ್ಷ ಪ್ರಸಾದ್ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸೇವೆ ಸಲ್ಲಿಸಲಿದ್ದು, ಅರ್ಹ ರೈತರಿಗೆ ಕೃಷಿಯಾಧಾರಿತ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಕೇಶವರೆಡ್ಡಿ, ಕೆ.ವಿ.ನಾಗರಾಜು, ಚೆನ್ನಕೃಷ್ಣಾರೆಡ್ಡಿ, ಪ್ರಭಾಕರ್‌ರೆಡ್ಡಿ, ಮಾಜಿ ಅಧ್ಯಕ್ಷ ಕಾಳೇಗೌಡ, ರಾಮಣ್ಣ, ವೆಂಕಟೇಶ್, ಹೀರೆನಹಳ್ಳಿ ನಾರಾಯಣಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ, ದಿಬ್ಬೂರು ಲವಣ್ಣ, ಆನಂದಮೂರ್ತಿ, ಗಂಗರೇಕಾಲುವೆ ಮೂರ್ತಿ, ತಿರುಮಳಪ್ಪ ಮತ್ತಿತರರು ಇದ್ದರು.


*ಕಾಂಗ್ರೆಸ್ ಗೆ ಮುಖಭಂಗ*
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪ್ರಸಾದ್ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮ ಹಿನ್ನಡೆ ಅನುಭವಿಸುವಂತಾಗಿದೆ.
ಸ್ವಕ್ಷೇತ್ರದಲ್ಲಿನ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಗೆ ಹಿನ್ನಡೆಯಾಗಿದೆ.