ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲಾ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವು (ಕಳೆದ ಎರಡೂವರೆ ತಿಂಗಳಿಂದಲೂ) ಉತ್ತಮ ಆದಾಯವನ್ನು ಗಳಿಸುತ್ತಿದೆ.
ಹಿಂದೆ 2023-24 ರಲ್ಲಿ ಜಿಲ್ಲೆಯಲ್ಲಿ 3, 94,694 ಲೀಟರ್ ಹಾಲು, 2024-&25 ನೇ ಸಾಲಿನಲ್ಲಿ 4,42,229 ಲೀಟರ್ ಹಾಲು ಉತ್ಪಾದನೆಯೊಂದಿಗೆ ಶೇ.12.08 ಬೆಳವಣಿಗೆಯಾಗಿದೆ. ಕಳೆದ ಜನವರಿಯಲ್ಲಿ ಒಕ್ಕೂಟ 1.39 ಕೋಟಿ ರೂ ಲಾಭ, ಫೆಬ್ರವರಿಯಲ್ಲಿ 1.39 ಕೋಟಿ ರೂ ಲಾಭ ಸಿಕ್ಕಿದೆ. ಈ ಮಾರ್ಚ್ನ ಅಂತ್ಯಕ್ಕೆ 1.50 ಕೋಟಿ ರೂ ಲಾಭದ ಲೆಕ್ಕಾಚಾರವಿದೆ. ಇನ್ನು ಒಕ್ಕೂಟವು ಪ್ರತ್ಯೇಕಗೊಳ್ಳುವ ಸಂದರ್ಭದಲ್ಲಿ ಹಾಲು ಉತ್ಪಾದನೆಯ ಪ್ರಮಾಣವನ್ನಾಧಾರಿಸಿ ಕೋಚಿಮುಲ್ನಿಂದ ಚರಾಸ್ತಿ, ಸ್ಥಿರಾಸ್ತಿ ಮತ್ತು ಸಾಲದಲ್ಲಿ ಶೇ.47 ರಷ್ಟು ಪಾಲನ್ನು ಪಡೆದುಕೊಂಡಿದೆ. 135 ಕೋಟಿ ರೂ ವೆಚ್ಚದಲ್ಲಿ ಪನ್ನೀರ್ ಟಕ ಆರಂಭ, 60 ಕೋಟಿ ರೂ ವೆಚ್ಚದ ಐಸ್ ಕ್ರೀಂ ಟಕ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಒಕ್ಕೂಟವು ಅಭಿವೃದ್ಧಿ ಕೆಲಸಗಳ ಜತೆಗೆ ರೈತರ ಸಂಕಷ್ಟಗಳ ಪರಿಹಾರದ ನಿಟ್ಟಿನಲ್ಲಿ ನೆರವು ಒದಗಿಸಬೇಕಾಗಿದೆ.
2025 ನೇ ಸಾಲಿನ ಜ.1 ರಂದು ಕೋಲಾರದಿಂದ ವಿಭಜನೆಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ರಚನೆಯಾಯಿತು. ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿಯ ಅಧಿಕಾರಾವಧಿ ಅಂತ್ಯಗೊಂಡಿರುವುದರಿಂದ ಪ್ರಸ್ತುತ ಆಡಳಿತಾಧಿಕಾರಿ ಉಸ್ತುವಾರಿ ವಹಿಸಿಕೊಂಡಿದ್ದಾರೆ.