ಜಿಲ್ಲೆ

ಯುಗಾದಿ ಹಬ್ಬ ದಿನದಂದು ಅಪರಾಧದ 48 ಪ್ರಕರಣಗಳು ದಾಖಲು

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಯುಗಾದಿ ಹಬ್ಬದ ಒಂದೇ ದಿನ ಜೂಜು, ಕೋಳಿ ಪಂದ್ಯ, ದೊಡ್ಡಿಗಳಲ್ಲಿ ಕುರಿಗಳ ಕಳವು ಸೇರಿದಂತೆ ವಿವಿಧ ಅಪರಾಧದ 48 ಪ್ರಕರಣಗಳು ದಾಖಲಾಗಿವೆ.
ಯುಗಾದಿ ಹಾಗೂ ರಂಜಾನ್ ಹಬ್ಬದ ಆಚರಣೆ, ಸಾಲು ರಜೆಗಳ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಅಲಾರ್ಟ್ ಆಗಿದ್ದು ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಯಾವುದೇ ರೀತಿಯ ಜೂಜಾಟ, ಕೋಳಿ ಪಂದ್ಯ, ಮಟ್ಕಾ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಜನರಿಗೆ ಎಚ್ಚರಿಕೆಯನ್ನೂ ನೀಡಿತ್ತು. ಹಾಗೆಯೇ ಕಾರ್ಯಾಚರಣೆಗಾಗಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು ಇದು ವಿವಿಧೆಡೆ ದಾಳಿ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದೆ.


*ದೊಡ್ಡಿಗಳಲ್ಲಿ ಕುರಿಗಳ ಮಾಯ  
ಮಾ.31 ಯುಗಾದಿ ಹಬ್ಬ. ಇದನ್ನು ಭಾನುವಾರ ಸಂಭ್ರಮದಿಂದ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಮಾರನೇಯ ದಿನ ಸೋಮವಾರದ ಬದಲಿಗೆ ಎಲ್ಲೆಡೆ ಮಂಗಳವಾರ ಹೊಸ ತೊಡಕು ನಿಗದಿಯಾಗಿದೆ. ಇದಕ್ಕೆ ಕುರಿ, ಮೇಕೆ, ಕೋಳಿಗಳ ಭರ್ಜರಿ ಮಾರಾಟದಲ್ಲಿ ಮಾಲೀಕರು ತೊಡಗಿರುವುದರ ನಡುವೆ ಹಲವೆಡೆ ದೊಡ್ಡಿಗಳಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಚಿಂತಾಮಣಿ, ಶಿಡ್ಲಟ್ಟ ಮತ್ತು ಚಿಕ್ಕಬಳ್ಳಾಪುರದ ವಿವಿಧ ಗ್ರಾಮಗಳಲ್ಲಿ ರಾತ್ರೋರಾತ್ರಿ ಕಳ್ಳರು ಮೇಕೆ, ಕುರಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಒಂದು ಕುರಿಗೆ ಕನಿಷ್ಠ 11 ಸಾವಿರ ರೂ ಬೆಲೆ ಇದ್ದು ಹಲವೆಡೆ 40 ಕ್ಕೂ ಹೆಚ್ಚು ಕಳವಾಗಿರುವುದರಿಂದ ಮಾಲೀಕರು ಸಾವಿರಾರು ನಷ್ಟ ಅನುಭವಿಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿದ್ದಾರೆ.

*ಪುಡಿರೌಡಿಗಳ ಗಲಾಟೆ
ಇಲ್ಲಿನ ಕಂದವಾರಪೇಟೆಯಲ್ಲಿನ ನಿರಾಶ್ರಿತ ವಸತಿ ಪ್ರದೇಶಗಳಲ್ಲಿ ಕರ್ಕಕ ಧ್ವನಿಯೊಂದಿಗೆ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಚಾಲನೆಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪುಡಿರೌಡಿಗಳು, ಗರ್ಭಿಣಿ, ವೃದ್ಧೆ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾಮೂಹಿಕವಾಗಿ ಏಳೆಂಟು ದ್ವಿಚಕ್ರ ವಾಹನಗಳಲ್ಲಿ ಪುಂಡರು ಜೋರು ಚಾಲನೆ ಮಾಡಿಕೊಂಡು ಹೋಗಿ, ಕರ್ಕಕ ಧ್ವನಿ ಉಂಟು ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಮಗು ಮಲಗಿದೆ, ನಿಶ್ಯಬ್ಧವಾಗಿ ಹೋಗಲು ಸಲಹೆ ನೀಡಿದ್ದು ಇದಕ್ಕೆ ಆಕ್ರೋಶಗೊಂಡ ಪುಡಿರೌಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ಬಾಣಂತಿ, ವೃದ್ಧೆಯ ಕೂದಳು ಹಿಡಿದು ಎಳೆದಿದ್ದು ಇದನ್ನು ತಡೆಯಲು ಬಂದವರನ್ನು ಥಳಿಸಿದ್ದಾರೆ. ಆರೋಪಿಗಳು ಹೊರ ಭಾಗದಲ್ಲಿ ಗಾಂಜಾ ಸೇವಿಸಿ ಅಡ್ಡಾಡುತ್ತಿದ್ದವರು ಎಂದು ಸ್ಥಳಿಯ ನಿವಾಸಿಗಳಾದ ಮಹೇಶ್, ಮುನಿಸ್ವಾಮಿ ಆರೋಪಿಸಿದ್ದಾರೆ.  
ಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪುಂಡರು ಅಲ್ಲಿಯೇ ಬಿಟ್ಟು ಹೋಗಿದ್ದ ಬೈಕುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.  

*ಹಬ್ಬದ ದಿನ ಕನ್ನ
ಚಿಕ್ಕಬಳ್ಳಾಪುರ ನಗರದ ಸುಣ್ಣಕಲ್ಲು ಬೀದಿಯಲ್ಲಿನ ಸರ್ಕಾರಿ ನೌಕರರೊಬ್ಬರ ಮನೆಗೆ ಕನ್ನ ಹಾಕಿರುವ ಕಳ್ಳರು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರ ಲೋಕೇಶ್ ಕುಟುಂಬವು ಚಿಂತಾಮಣಿಗೆ ಹೋಗಿತ್ತು. ಇದರ ನಡುವೆ ಕಳ್ಳರು ಮನೆಯ ಬಾಗಿಲು ಹೊಡೆದು ಒಳ ಹೊಕ್ಕಿದ್ದು 350 ಗ್ರಾಂ ಬಂಗಾರ, ಅರ್ಧ ಕೆ.ಜಿ.ಬೆಳ್ಳಿಯನ್ನು ಕದ್ದು ಪರಾರಿಯಾಗಿದ್ದಾರೆ. ಇದಕ್ಕೂ ಮೊದಲು ನೆರೆಹೊರೆ ಮನೆಗಳ ಚಿಲಕವನ್ನು ಹಾಕಲಾಗಿದೆ. ಬೆಳಿಗ್ಗೆ ಸ್ಥಳಿಯರು ಬೇರೆಯವರ ನೆರವಿನಿಂದ ಬಾಗಿಲು ತೆಗೆಸಿಕೊಂಡು ಹೊರ ಬಂದಿದ್ದು ಕಳ್ಳತನವಾದ ಮನೆಯ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.