ಚಿಕ್ಕಮಗಳೂರು: ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಸಾಮಾಜಿಕ ಜಾಲತಾಣವನ್ನೇ ತನ್ನ ಜಗತ್ತಾಗಿಸಿಕೊಂಡಿದ್ದ ಹುಡುಗಿ ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮನೆಯವರು ಹೇಳಿದರೂ ಸಹ ಪೊಲೀಸರಿಗೆ ಸಣ್ಣ ಅನುಮಾನ ಬಂದು ತನಿಖೆ ನಡೆಸಲು ಮುಂದಾಗಿದ್ದಾರೆ.
ಸಿಂಧೂ ಮೃತ ದುರ್ದೈವಿ. ಕಾಫಿನಾಡು ಚಿಕ್ಕಮಗಳೂರು ನಗರದ ಕಲ್ಯಾಣನಗರದ ನಿವಾಸಿ. ದ್ವಿತೀಯ ಪಿಯುಸಿಯಲ್ಲಿ ಫೇಲ್ ಅಗಿ ಸಿಂಧೂ ಮನೆಯಲ್ಲಿಯೇ ಇದ್ದಳು. ಓದುವುದರಲ್ಲಿ ಆಸಕ್ತಿ ಹೊಂದಿರದ ಆಕೆಯ ಮನಸ್ಸು ಸಾಮಾಜಿಕ ಜಾಲತಾಣದ ಮೇಲೆ ಸೆಳೆದಿತ್ತು. ಹೀಗಾಗಿಯೇ ಜಾಲತಾಣದಲ್ಲಿ ಸದಾ ಬಿಜಿಯಾಗಿರುತ್ತಿದ್ದಳು. ಅದರಲ್ಲೂ ಟಿಕ್ಟಾಕ್ನಲ್ಲಿ ಸಂಪೂರ್ಣ ಸಮಯ ಕಳೆಯುತ್ತಿದ್ದಳು. ಯಾವಾಗ ಟಿಕ್ಟಾಕ್ ಬ್ಯಾನ್ ಆಯ್ತೋ ಆವಾಗ ಆಕೆಯ ಗಮನ ರೋಪೋಸ್ ಮತ್ತು ಫೇಸ್ಬುಕ್ ಮೇಲೆ ಬಿತ್ತು. ವಿಡಿಯೋಗಳನ್ನು ಹರಿಬಿಟ್ಟು ಸಾವಿರಾರು ಲೈಕ್ ಪಡೆಯುತ್ತಿದ್ದ ಸಿಂಧೂ ನಿನ್ನೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಿಂಧೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ದೂರು ನೀಡಿದ್ದಾರೆ. ಆದರೆ, ದೂರು ಸ್ವೀಕರಿಸಿದ ಪೊಲೀಸರಿಗೆ ಅನುಮಾನವೊಂದು ಕಾಡತೊಡಗಿದೆ. ಇತ್ತ ಸಿಂಧೂ ತಲೆಗೆ ಪೆಟ್ಟಾಗಿರುವ ಮಾಹಿತಿ ಸಿಗುತ್ತಿದ್ದಂತೆ ಮೃತದೇಹವನ್ನು ಚಿಕ್ಕಮಗಳೂರಿನಲ್ಲಿ ಶವಪರೀಕ್ಷೆ ಮಾಡೋದು ಬೇಡ ಹಾಸನಕ್ಕೆ ಕಳುಹಿಸಿ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ. ಈಗಾಗಲೇ ಹಾಸನದಲ್ಲಿ ಶವಪರೀಕ್ಷೆ ನಡೆದಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಲೈಕ್ ಪಡೆಯುತ್ತಿದ್ದ ಸಿಂಧೂ ಸಾವಿನ ದಡ ಸೇರಿದ್ದಾಳೆ. ಅತ್ಮಹತ್ಯೆಯೇ ಮಾಡಿಕೊಂಡಿದ್ದಾಳೆ ಅನ್ನೋದು ಬಹುತೇಕ ಖಚಿತವಾಗುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ. ಆದ್ರೆ ಆಕೆಯ ತಲೆಗಾದ ಗಾಯದ ಹಿಂದೆನೂ ನಡೆಯಿತು ಅನ್ನೋ ಮಾತ್ರ ನಿಗೂಡವಾಗಿಯೇ ಇದೆ. (ದಿಗ್ವಿಜಯ ನ್ಯೂಸ್)