ಜಿಲ್ಲೆ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಮಾತ್ರ ಎತ್ತಿನಹೊಳೆ ಯೋಜನೆ ನೀರು ಸೀಮಿತಗೊಳಿಸಬೇಕು: ಸಂಸದ ಬಚ್ಚೇಗೌಡ ಆಗ್ರಹ

ಬಾಗೇಪಲ್ಲಿ: ಕ್ಷಾಮಕ್ಕೆ ತುತ್ತಾಗಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಮಾತ್ರ ಎತ್ತಿನಹೊಳೆ ಯೋಜನೆ ನೀರನ್ನು ಸೀಮಿತಗೊಳಿಸಬೇಕೆಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಚಿಗುರೆಗುಂಡ್ಲಪಲ್ಲಿಯಲ್ಲಿ ಶನಿವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದಾನಂದಗೌಡರು ಸಿಎಂ ಆಗಿದ್ದ ವೇಳೆ ಅನುಷ್ಠಾನಕ್ಕೆ ತಂದಿರುವ ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ತಡವಾಗುತ್ತಿರುವ ಕಾರಣ ಕಾಮಗಾರಿ ತ್ವರಿತವಾಗಿ ಮುಗಿಯುತ್ತಿಲ್ಲ. ರಾಜ್ಯದಲ್ಲೇ ಅತಿಹೆಚ್ಚು ನೀರಿನ ಸಮಸ್ಯೆ ಇರುವುದು ಮತ್ತು ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದ ಜಿಲ್ಲೆಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ. ಇಲ್ಲಿ ರೈತಾಪಿ ವರ್ಗದವರು ಸಂಕಷ್ಟದಲ್ಲಿದ್ದು, ಕೃಷಿ ಕ್ಷೇತ್ರ ಅವನತಿಯತ್ತ ಸಾಗುತ್ತಿದೆ. 24.5 ಟಿಎಂಸಿ ನೀರನ್ನು ಎತ್ತಿನಹೊಳೆ ಯೋಜನೆ ಮೂಲಕ ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುವ ಏಕೈಕ ಕುಡಿಯುವ ನೀರಿನ ಯೋಜನೆ ಇದಾಗಿದ್ದು ಯೋಜನೆಯ ಸಂಪೂರ್ಣ ನೀರನ್ನು ಎರಡು ಜಿಲ್ಲೆಗಳಿಗೆ ಸೀಮಿತಗೊಳಿಸುವ ಅಗತ್ಯವಿದೆ ಎಂದರು.

2020ರ ಮಾರ್ಚ್ ಬಜೆಟ್‌ನಲ್ಲಿ ಲೋಕಸಭಾ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ 240 ಕೋಟಿ ರೂ. ಬಿಡುಗಡೆ ಆಗಲಿದೆ. ಕ್ಷೇತ್ರ ವ್ಯಾಪ್ತಿಗೆ 8 ತಾಲೂಕು ಬರಲಿದ್ದು ಪ್ರತಿ ತಾಲೂಕಿಗೂ ತಲಾ 30 ಕೋಟಿ ರೂ. ಅನುದಾನ ಸಿಗಲಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಮಾಜ ಸೇವಕ ಅನಂದಸ್ವಾಮಿ, ಸಾಧಕರಾದ ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ರಾಮರೆಡ್ಡಿ, ಜಿಪಂ ಮಾಜಿ ಸದಸ್ಯ ಬೂರಗಮಡುಗು ರಾಮರೆಡ್ಡಿ, ಗೂಳೂರು ಕೆ.ವಿ.ರಾಮಯ್ಯಶೆಟ್ಟಿ, ಇಂಗ್ಲಿಷ್ ಮದ್ದಿರೆಡ್ಡಿ, ಸಂಗೀತ ವಿದ್ವಾಂಸರಾದ ಆಂಜನೇಯಲು, ಲಕ್ಷ್ಮೀನಾರಾಯಣ, ದಲಿತ ಮುಖಂಡ ಪೂಜಪ್ಪ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಗೂಳೂರು ಲಕ್ಷ್ಮೀನಾರಾಯಣ, ಎಸ್.ಟಿ.ಚಂದ್ರಮೋಹನ್, ಮಲ್ಲಿಕಾರ್ಜುನರೆಡ್ಡಿ, ಎ.ವೇಣುಗೋಪಾಲ್, ವೆಂಕಟ ರಮಣಪ್ಪ, ಚಿಗುರೆಗುಂಡ್ಲಪಲ್ಲಿ ರಂಗಪ್ಪ, ಯಲ್ಲಂಪಲ್ಲಿ ಮಂಜುನಾಥರೆಡ್ಡಿ, ಸಾದಲಿ ರಾಜೇಂದ್ರ ಇದ್ದರು.