ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ನಡುವೆ ಸಂಚರಿಸುವ ಬಿಆರ್ ಟಿಎಸ್ ಚಿಗರಿ 100 ನಿಯಮಿತ ನಿಲುಗಡೆ ಬಸ್ ಗಳಿಗೆ ನಗರದ ಬಿವಿಬಿ ಕಾಲೇಜು ಎದುರು ನಿಲುಗಡೆ ಕಲ್ಪಿಸಿದ ಹಿನ್ನೆಲೆಯಲ್ಲಿ ಸಂಭ್ರಮ ಹಂಚಿಕೊಳ್ಳಲಾಯಿತು.
ಪ್ರಯಾಣಿಕರು ಮತ್ತು ವಿದ್ಯಾರ್ಥಿ ಸಮುದಾಯದ ಬಹುದಿನದ ಬೇಡಿಕೆಯಂತೆ ವಾಯವ್ಯ ಸಾರಿಗೆ ಸಂಸ್ಥೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 17ರಿಂದ ಎಲ್ಲ 100 ನಿಯಮಿತ ನಿಲುಗಡೆ ಚಿಗರಿ ಬಸ್ ಗಳು ಕಡ್ಡಾಯವಾಗಿ ಬಿವಿಬಿ ಎದುರು ನಿಲ್ಲಿಸಲು ಸೂಚಿಸಲಾಗಿದೆ ಎಂದು ಕೆಎಲ್ಇ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪರವಾಗಿ ಬಿಆರ್ ಟಿಎಸ್ ನಿಲ್ದಾಣದಲ್ಲಿ ಸಾರಿಗೆ ವಿಭಾಗದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು.
ಸೌಲಭ್ಯ ಒದಗಿಸಲು ಸಹಕರಿಸಿದ ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಾದ ಎಂ. ಸಿದ್ಧಲಿಂಗೇಶ, ಸಂಗಮೇಶ ಮಾಟೋಳಿ, ಗುರುಪ್ರಸಾದ ಹೋಗಾಡಿ ಮತ್ತು ವನಜಾಕ್ಷಿ ಬಣಕಾರ ಹಾಗೂ ಚಿಗರಿ ಚಾಲಕರಿಗೆ ಅಭಿನಂದನೆ ಸಲ್ಲಿಸಲಾಯಿತು.