ಚಿತ್ರದುರ್ಗ: ತುರುವನೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಹಂತ, ಹಂತವಾಗಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿಯಲ್ಲಿ ಗುರುವಾರ ಅಂದಾಜು 3.60 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳು ಹಾಗೂ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ತುರುವನೂರು ಹೋಬಳಿಯ ಸಮಗ್ರ ಅಭಿವೃದ್ಧಿ ನನ್ನ ಚಿಂತನೆಯಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಮುಂದಿನ ದಿನದಲ್ಲಿ ಹೋಬಳಿಯ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದರು.
ಮುಖ್ಯಮಂತ್ರಿ ವಿಶೇಷ ಪ್ರದೇಶಾಭಿವೃದ್ಧಿ ಯೋಜನೆಯಡಿ 2 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಗೊಂಡನಹಳ್ಳಿ- ಚಿಕ್ಕಪ್ಪನಹಳ್ಳಿ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರಿಗೆ ಸೂಚಿಸಿದರು.
ಚಿಕ್ಕಗೊಂಡನಹಳ್ಳಿ ಬೆಸ್ತರ ಕಾಲನಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕವನ್ನೂ ಉದ್ಘಾಟಿಸಿದರು. ಇದರ ವ್ಯವಸ್ಥಿತ ನಿರ್ವಹಣೆಗೆ ಗ್ರಾಪಂಗೆ ತಿಳಿಸಿದ್ದೇನೆ ಎಂದರು.
ಇದೇ ಕಾಲನಿಯಲ್ಲಿ 10 ಲಕ್ಷ ರೂ.ವೆಚ್ಚದೊಂದಿಗೆ ಸಮುದಾಯ ಭವನ, ಎಸ್‌ಸಿ ಕಾಲನಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನ ಕಟ್ಟಡ, ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ 65 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ, 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ.ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಲಾಗಿದೆ. ತುರುವನೂರಿನಲ್ಲಿ ರಸ್ತೆ ವಿಸ್ತರಣೆ, ಗಾಂಧಿ ಪಾರ್ಕ್, ಮುರಾರ್ಜಿ ಶಾಲೆಗಳ ಅಭಿವೃದ್ಧಿ ಮಾಡಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ, ಉಪಾಧ್ಯಕ್ಷ ಗಂಗಾಧರ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ, ತಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಗಟ್ಟಿ ಓಬಯ್ಯ, ತಿಪ್ಪೇಸ್ವಾಮಿ, ದಾಸಪ್ಪ, ರಾಘವೇಂದ್ರ, ನಾಗರಾಜ, ಚಿದಾನಂದಮೂರ್ತಿ, ಮಲ್ಲಿಕಾರ್ಜುನ, ರವಿ, ಹರೀಶ್ ಇದ್ದರು.