ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸೋಮವಾರ ಬಾಗಿನ ಅರ್ಪಿಸಲು ಬರುವ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಪೂರ್ವ ಸಿದ್ಧತೆ ಬಗ್ಗೆ ಭಾನುವಾರ ಪರಿಶೀಲನೆ ನಡೆಸಿದರು. 
ಜಿಲ್ಲೆ

ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಇಂದು

ಎಚ್.ಡಿ.ಕೋಟೆ: ತಾಲೂಕಿನ ಕಬಿನಿ ಜಲಾಶಯಕ್ಕೆ ಬಾಗಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಭಾನುವಾರ ಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಿದರು.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದ ಮಂತ್ರಿಗಳು ಕಬಿನಿ ಜಲಾಶಯಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಹಾಗಾಗಿ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗಬಾರದು ಎಂಬ ಹಿನ್ನೆಲೆಯಲ್ಲಿ ಶಾಸಕರು ನೀರಾವರಿ ಅಧಿಕಾರಿಗಳ ಜತೆ ಜಲಾಶಯಕ್ಕೆ ಬೇಟಿ ನೀಡಿ ಕಾರ್ಯಕ್ರಮ ರೂಪುರೇಷೆ ತಯಾರಿ ಬಗ್ಗೆ ವೀಕ್ಷಿಸಿದರು.

ನಂತರ ಶಾಸಕರು, ಮುಖ್ಯಮಂತ್ರಿ ಬಾಗಿನ ಅರ್ಪಿಸುವ ಸ್ಥಳ, ಕಬಿನಿ ಪ್ರವಾಸಿ ಮಂದಿರ ಸೇರಿದಂತೆ ಎಲ್ಲ ಸ್ಥಳಗಳನ್ನು ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಮೈಸೂರಿನಿಂದ ರಸ್ತೆ ಮಾರ್ಗವಾಗಿ ಆಗಮಿಸುವ ಹಿನ್ನೆಲೆಯಲ್ಲಿ ಹ್ಯಾಂಡ್‌ಪೋಸ್ಟ್ ವೃತ್ತದಿಂದ ಬೀಚನಹಳ್ಳಿ ಜಲಾಶಯದವರೆಗೆ ಗುಂಡಿ ಬಿದ್ದ ರಸ್ತೆಗೆ ಡಾಂಬಾರು ಹಾಕಿ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ.

ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಜಲಾಶಯದ ನೀರಿನ ಸರಾಸರಿ ಮಟ್ಟ ಕಾಯ್ದುಕೊಳ್ಳಲು ನೀರಾವರಿ ಅಧಿಕಾರಿಗಳು ಮುಂದಾಗಿದ್ದಾರೆ. ಶಾಸಕರು ಕಬಿನಿ ಜಲಾಶಯಕ್ಕೆ ಬೇಟಿ ಸಂದರ್ಭದಲ್ಲಿ ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಸರಗೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್, ನೀರಾವರಿ ಇಲಾಖೆ ಎಇಇ ಗಣೇಶ್, ಎಇ ರಮೇಶ್‌ಬಾಬು, ವಿಶ್ವನಾಥ್ ಇದ್ದರು.

ಕಬಿನಿ ಉತ್ಸಕ್ಕೆ ರೂಪುರೇಷೆ ಸಿದ್ಧತೆ: ರಾಜ್ಯದ ಮೊದಲ ತುಂಬುವ ಜಲಾಶಯ, ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಗೌರವವನ್ನು ಕಾಪಾಡುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ಆಗಮಿಸಿ ಬಾಗಿನ ಅರ್ಪಿಸುತ್ತಿರುವುದು ನಮ್ಮ ಸೌಭಾಗ್ಯ. ಜಲಾಶಯ ನಿರ್ಮಾಣ ಆಗಿ 50 ವರ್ಷ ತುಂಬಿರುವ ಸಂದರ್ಭದಲ್ಲಿ ಕಬಿನಿ ಉತ್ಸವ ಮಾಡಲು ಎಲ್ಲ ರೂಪುರೇಷೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಆಗಮನದಿಂದ ತಾಲೂಕಿನ ಜನತೆಯ ಪರವಾಗಿ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹಲವಾರು ಬೇಡಿಕೆಗಳನ್ನು ಈಗಾಗಲೇ ಸಲ್ಲಿಸಿದ್ದೇನೆ. ಬಾಗಿನ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡಿಕೆ ಈಡೇರಿಸುವ ಭರವಸೆ ಇಟ್ಟುಕೊಂಡಿದ್ದೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.