ಜಿಲ್ಲೆ

ಶಿಕ್ಷಣದೊಂದಿಗೆ ಸಂವಿಧಾನ ಅರಿಯಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

ಮೈಸೂರು: ಸಮಾಜದಲ್ಲಿ ಸಮಾನತೆ ಬರಲು ಹೆಣ್ಣು ಮಕ್ಕಳು ಶಿಕ್ಷಣ ಕಲಿಯುವ ಜತೆಗೆ ಸಂವಿಧಾನವನ್ನು ಅರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಮಹಾರಾಣಿ ಮಹಿಳಾ ಕಾಲೇಜಿನ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗಗಳಲ್ಲಿ 219 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ಕಟ್ಟಡ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಒಂದು ವರ್ಗದವರು ಮಾತ್ರ ಶಿಕ್ಷಣ ಕಲಿಯಬೇಕಿತ್ತು. ಶೂದ್ರರಂತೆ ಇಡೀ ಮಹಿಳಾ ಕುಲವನ್ನೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು. ಆದರೆ ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿ ಅಸಮಾನತೆ, ತಾರತಮ್ಯ ಇದ್ದು, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಹಾಗಾಗಿ ಎಲ್ಲೆಡೆ ಸಮಾನತೆ ಬರಲು ಎಲ್ಲರೂ ಶಿಕ್ಷಣ ಕಲಿಯಬೇಕು. ಅಲ್ಲದೆ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಸಂವಿಧಾನವನ್ನು ಅಧ್ಯಯನ ಮಾಡಬೇಕು. ಶಿಕ್ಷಣದಿಂದ ಮಾತ್ರ ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಲು ಸಾಧ್ಯ ಎಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇಲ್ಲಿಯವರೆಗೂ 325 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.

ಮಹಿಳೆಯರಿಗೆ ಮೊದಲಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು ಬಸವಣ್ಣನರಾದರೆ, ಶಿಕ್ಷಣ ಮಹಿಳೆಯರ ಹಕ್ಕಾಗಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆದ್ದರಿಂದ ನೀವೆಲ್ಲಾ ಜಾತ್ಯತೀತರಾಗಿ, ವಿಶ್ವ ಮಾನವರಾಗಿ ಬೆಳೆದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಶಿಕ್ಷಣ ಕಲಿತೂ ಜಾತಿವಾದಿಗಳಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಮಹಾರಾಣಿ ಕಾಲೇಜಿಗೆ ಕಟ್ಟಡ ಸಮಸ್ಯೆ ಉಂಟಾಗಿದ್ದರಿಂದ ಮೊದಲ ಅವಧಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಪಡುವಾರಹಳ್ಳಿಯಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದ್ದು, 4 ಸಾವಿರ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. 600 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಇದ್ದು, ಇನ್ನು 600 ಜನರಿಗಾಗಿ ಹಾಸ್ಟೆಲ್ ವಿಸ್ತರಿಸಲಾಗುತ್ತಿದೆ. ಬಿದ್ದಿದ್ದ ವಿಜ್ಞಾನ ಕಾಲೇಜಿನ ಕಟ್ಟಡ, 1700 ವಿದ್ಯಾರ್ಥಿನಿಯರು ಉಳಿಯಬಹುದಾಗ ಹಾಸ್ಟೆಲ್, ಕಲಾ ಕಾಲೇಜಿಗೆ ಕಟ್ಟಡ ನಿರ್ಮಿಸಲಾಗುತ್ತಿದ್ದು, ಶೀಘ್ರವೇ ಕಾಮಗಾರಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದೇಶದಲ್ಲಿ ಅಧ್ಯಯನಕ್ಕೆ ಉಚಿತ ಅವಕಾಶ:

ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಎನ್.ಸಿ.ಸುಧಾಕರ್ ಮಾತನಾಡಿ, ನಮ್ಮ ಸರ್ಕಾರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದೆ. 45 ಕಾಲೇಜುಗಳಲ್ಲಿ ಹೊಸ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. 6 ವಿವಿಗಳ 30 ವಿದ್ಯಾರ್ಥಿಗಳನ್ನು ಲಂಡನ್‌ಗೆ ಶೈಕ್ಷಣಿಕ ಅಧ್ಯಯನಕ್ಕೆ ಕಳುಹಿಸಲಾಗಿದೆ. ಮುಂದಿನ ವರ್ಷದಿಂದ ಸರ್ಕಾರಿ ಕಾಲೇಜಿನ ಐವರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ 20 ಲಕ್ಷ ರೂ. ನೀಡಲಾಗುತ್ತದೆ. ಇದಕ್ಕಾಗಿ ಪ್ರತಿ ವರ್ಷ ಒಂದು ಕೋಟಿ ರೂ. ಖರ್ಚು ಮಾಡಲಾಗುತ್ತದೆ ಎಂದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ನೂತನ ಕಟ್ಟಡ, ಹಾಸ್ಟೆಲ್ ಅನ್ನು ಪುರಾತತ್ವ ಇಲಾಖೆ ಒಪ್ಪಿದ ವಿನ್ಯಾಸದಲ್ಲೇ ಇಂದಿನ ಕಾಲಘಟ್ಟಕ್ಕೆ ಏನೇನು ಸೌಲಭ್ಯ ಬೇಕು ಎಲ್ಲವನ್ನೂ ನೂತನ ಕಟ್ಟಡ ಒಳಗೊಂಡಿದೆ. ಜತೆಗೆ ರಾಜ್ಯದಲ್ಲೇ ಮಾದರಿಯಾಗುವಂತಹ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಮಹಾರಾಜರ ಹೆಸರು ಚಿರಸ್ಥಾಯಿಯಾಗಿರುವಂತೆ ಸಿದ್ದರಾಮಯ್ಯ ಹೆಸರು ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯುತ್ತದೆ. 24 ತಿಂಗಳೊಳಗೆ ನೂತನ ಕಟ್ಟಡಗಳು ಉದ್ಘಾಟನೆಯಾಗಲಿದ್ದು, ಮೂರು ಕಾಲೇಜುಗಳಿಂದ 9 ಸಾವಿರ ವಿದ್ಯಾರ್ಥಿನಿಯರು ಅಭ್ಯಾಸ ಮಾಡಲಿದ್ದಾರೆ. ಪ್ರಸ್ತುತ ಹಾಸ್ಟೆಲ್ನಲ್ಲಿರುವ 600 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಅರಸೀಕರೆ ಶಾಸಕರಾದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಿದ್ದರಾಮಯ್ಯ ಅಭಿವೃದ್ಧಿ ಮಾಡಿಲ್ಲ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಏನಾದರೂ ನಡೆದಿದ್ದರೆ ಅದು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎನ್ನುವುದನ್ನು ಮರೆಯಬಾರದು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿದ್ದ 1.80 ಲಕ್ಷ ಕೋಟಿ ರೂ. ಸಾಲ ತೀರಿಸುವ ಜವಾಬ್ದಾರಿಯೂ ಸಿದ್ದರಾಮಯ್ಯ ಅವರ ಮೇಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಇತರರು ಇದ್ದರು.