ಶಿವಮೊಗ್ಗ: ಡಿಜಿಟಲ್ ಡಿಸ್ಲೈ ಬೋರ್ಡ್‌ಗಳ ಜಾಹೀರಾತು ನಿರ್ವಹಣೆಯ ಎರಡು ತ್ರೈಮಾಸಿಕ ಬಿಲ್ ಬಿಡುಗಡೆ ಮಾಡುವುದಕ್ಕೆ ಒಂದು ಲಕ್ಷ ರೂ. ಲಂಚ ಸ್ವೀಕರಿಸಿದ ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಪ್ರಭಾರ ಮುಖ್ಯ ಅಭಿಯಂತರ ಎಂ.ಕೃಷ್ಣಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಟ್ರ್ಯಾಪ್ ಮಾಡಿದ್ದಾರೆ.
ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ನಿವಾಸಿ, ಎಕ್ಸ್‌ಟೀಮ್ ಮೀಡಿಯಾ ಪ್ರೈ.ಲಿ.ನ ಎಕ್ಸಿಕ್ಯೂಟಿವ್ ಸೈಟ್ ಇಂಜಿನಿಯರ್ ಎಂ.ಎಸ್.ಪವನ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೃಷ್ಣಪ್ಪ ಅವರನ್ನು ಲೋಕಾಯುಕ್ತ ಎಸ್‌ಪಿ ಎಂ.ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಎಕ್ಸ್‌ಟೀಮ್ ಮೀಡಿಯಾ ಪ್ರೈ.ಲಿ. ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್ ಮೂಲಕ ಡಿಜಿಟಲ್ ಡಿಸ್ಲೈ ಬೋರ್ಡ್‌ಗಳ ಜಾಹೀರಾತು ಟೆಂಡರ್ ಪಡೆದಿತ್ತು. ಐದು ವರ್ಷ ಸಂಪೂರ್ಣ ನಿರ್ವಹಣೆಯನ್ನು ಕಂಪನಿಯೇ ನೋಡಿಕೊಳ್ಳುವ ಒಪ್ಪಂದ ಆಗಿತ್ತು. ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಏಳು ಡಿಜಿಟಲ್ ಡಿಸ್ಪೈ ಬೋರ್ಡ್‌ಗಳ ಜಾಹೀರಾತು ನಿರ್ವಹಣೆಯನ್ನು ಕಂಪನಿ ನೋಡಿಕೊಳ್ಳುತ್ತಿದೆ. ಈ ಸಂಬಂಧ ಕಂಪನಿಗೆ ಎರಡು ತ್ರೈಮಾಸಿಕದ 11,16,100 ರೂ. ಬಿಲ್ ಬಿಡುಗಡೆಗೆ ಸ್ಮಾರ್ಟ್‌ಸಿಟಿ ವಿಭಾಗದ ಪ್ರಭಾರ ಮುಖ್ಯ ಅಧೀಕ್ಷಕ ಎಂ.ಕೃಷ್ಣಪ್ಪ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಪವನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಮಧ್ಯಾಹ್ನ ಎಂ.ಕೃಷ್ಣಪ್ಪ ಅವರು ಸ್ಮಾರ್ಟ್‌ಸಿಟಿ ಮುಂಭಾಗದ ಆವರಣದಲ್ಲಿ ಪವನ್ ಅವರಿಂದ ಒಂದು ಲಕ್ಷ ರೂ. ಲಂಚ ಪಡೆದಿದ್ದರು. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಎಂ.ಕೃಷ್ಣಪ್ಪ ಅವರನ್ನು ಟ್ರ್ಯಾಪ್ ಮಾಡಿದ್ದಾರೆ. ಲಂಚ ಹಣ ಜಪ್ತಿ ಮಾಡಿ ಎಂ.ಕೃಷ್ಣಪ್ಪ ಅವರನ್ನು ವಶಕ್ಕೆ ಪಡೆದಿದ್ದು ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ಅವರು ತನಿಖೆ ಕೈಗೊಂಡಿದ್ದಾರೆ.
ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ, ಸಿಬ್ಬಂದಿಗಳಾದ ಜಿ.ಸಿ.ಯೋಗೇಶ್, ಎನ್.ಬಿ.ಟೀಕಪ್ಪ, ಎಂ.ಮಂಜುನಾಥ, ಎಚ್.ಜಿ.ಸುರೇಂದ್ರ, ಎಚ್.ಪ್ರಶಾಂತ್ ಕುಮಾರ್, ಬಿ.ಟಿ. ಚನ್ನೇಶ್, ವಿ.ದೇವರಾಜ್, ಯು.ಬಿ.ಅರುಣ್ ಕುಮಾರ್, ಪ್ರಕಾಶ್ ಬಾರಿಮರದ, ಆದರ್ಶ, ಚಂದ್ರಿಬಾಯಿ, ಪ್ರದೀಪ, ವಿ.ಗೋಪಿ, ಕೆ.ಸಿ.ಜಯಂತ್, ತರುಣ್ ಕುಮಾರ್, ಗಂಗಾಧರ, ಆನಂದ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.