ಜಿಲ್ಲೆ

ಅರಕೇರಿ ಗ್ರಾಮಕ್ಕೆ ಜಿಪಂ ಮುಖ್ಯಲೆಕ್ಕಾಧಿಕಾರಿ ಭೇಟಿ

ತಿಕೋಟಾ: ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಗ್ರಂಥಾಲಯ, ವಸತಿ ನಿಲಯಗಳಿಗೆ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯಲೆಕ್ಕಾಧಿಕಾರಿ ಹಾಗೂ ತಿಕೋಟಾ ತಾಲೂಕು ಪಂಚಾಯಿತಿಯ ಆಡಳಿತಾಧಿಕಾರಿ ರಾಮಣ್ಣ ಅಥಣಿ ದಿಢೀರ್ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಆರಂಭದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿದ ಅವರು ಶಾಲೆಯಲ್ಲಿ ಗುಣಮಟ್ಟದ ಗ್ರಂಥಾಲಯ ಸಿದ್ಧಪಡಿಸಲು ಶಿಕ್ಷಕರಿಗೆ ತಿಳಿಸಿದರು. ಅಗತ್ಯ ಸಾಮಗ್ರಿ ಪಟ್ಟಿ ತಯಾರಿಸಿ ತಾಲೂಕು ಪಂಚಾಯಿತಿಗೆ ಸಲ್ಲಿಸಲು ಸೂಚಿಸಿದ ಅವರು ಸಾಮಗ್ರಿಯನ್ನು ತಾಲೂಕು ಪಂಚಾಯಿತಿ ಅನುದಾನದಲ್ಲಿ ನೀಡುವ ಭರವಸೆ ನೀಡಿದರು. ಅಡುಗೆ ಕೋಣೆ, ಉಗ್ರಾಣ ಕೋಣೆ, ಐಟಿ ಕೋಣೆ ಸೇರಿ ವಿವಿಧ ಕೊಠಡಿಗಳನ್ನು ಪರಿಶೀಲಿಸಿದರು. ಶಾಲಾ ಮಕ್ಕಳೊಂದಿಗೆ ಚರ್ಚಿಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಜತೆಗೆ ಯಾವುದೇ ಸ್ಥಳದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಸರ್ಕಾರಿ ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಬಿಸಿಯೂಟದ ಅಡುಗೆ ಕೋಣೆ ಸೇರಿ ಎಲ್ಲೆಡೆ ಸ್ವಚ್ಛತೆ ಕಾಪಾಡಲು ಶಿಕ್ಷಕರು ಹಾಗೂ ಅಡುಗೆ ಸಹಾಯಕರಿಗೆ ಸೂಚನೆ ನೀಡಿದರು.

ತಾಪಂ ಸಹಾಯಕ ಲೆಕ್ಕಾಧಿಕಾರಿ ಅನ್ವರಹುಸೇನ ನದಾಫ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕಾರ್ಯದರ್ಶಿ ಜಿ.ಎಸ್.ಕುಂಬಾರ, ತಾಲೂಕು ಪಂಚಾಯಿತಿಯ ವಿಜಯ ಯರಗಟ್ಟಿ, ಶ್ರೀಮಂತ ಕಟ್ಟಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.