ಜಿಲ್ಲೆ

ಕಡಲೆಗೆ ‘ಹಸಿರು ಕೀಟ’ ಬಾಧೆ, ರೋಗ ನಿಯಂತ್ರಣ ಕಷ್ಟಸಾಧ್ಯ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಂಗಾಮಿನಲ್ಲೂ ಸಾಲದ ಸುಳಿಗೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ.

ಬರಗಾಲದ ನಡುವೆಯೂ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ಬಿತ್ತನೆ ಮಾಡಿದ್ದ ಕಡಲೆಬೆಳೆಗೆ ಈಗ ಕೀಟಬಾಧೆ ಆವರಿಸಿದೆ. ಮುಂಗಾರಿನಲ್ಲಿ ಸಂಪೂರ್ಣವಾಗಿ ಕೈಸುಟ್ಟಿಕೊಂಡಿರುವ ರೈತರು, ಕಡಲೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ಮುಂಗಾರಿನಲ್ಲಿ ಬೆಳೆದ ಶೇಂಗಾ, ಹೆಸರು, ಮೆಕ್ಕೆಜೋಳ, ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಸೇರಿ ಎಲ್ಲ ಬೆಳೆಗಳೂ ಒಣಗಿ ರೈತರು ಹಾನಿ ಅನುಭವಿಸಿದ್ದಾರೆ. ಅಕ್ಟೋಬರ್‌ನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಆಶಾಭಾವನೆಯಿಂದ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಈಗ ಒಂದೂವರೆ ತಿಂಗಳ ಅವಧಿಯದ್ದಾಗಿದೆ. ಈ ಹಂತದಲ್ಲಿ ಈಗಾಗಲೇ ಕಡಲೆಗೆ ಕೀಟಬಾಧೆ ಆವರಿಸಿದೆ. ರೈತರು ಕ್ರಿಮಿನಾಶಕ ಸಿಂಪಡಣೆ, ಜಮೀನಿಗೆ ಮಂಡಕ್ಕಿ, ಮೆಲಾಥಿಯನ್ ಡಸ್ಟ್ ಎರಚುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ರೋಗ ಹತೋಟಿಗೆ ಬರುತ್ತಿಲ್ಲ.

ಲಕ್ಷ್ಮೇಶ್ವರ, ಅಡರಕಟ್ಟಿ, ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಶಿಗ್ಲಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ ಜಮೀನುಗಳಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಅಂದಾಜು 5,000 ಹೆಕ್ಟೇರ್‌ನಲ್ಲಿ ಕಡಲೆಯ ಬಿತ್ತನೆಯಾಗಿದೆ. ಮೊದಲೇ ಖಾಲಿ ಕೈಯಲ್ಲಿರುವ ರೈತ ಸಮುದಾಯ ಕ್ರಿಮಿನಾಶಕ ಸಿಂಪಡಣೆಗಾಗಿ ಮತ್ತೆ ಸಾವಿರಾರು ರೂಪಯಿ ಖರ್ಚು ಮಾಡಬೇಕಾಗಿದೆ. ರೋಗ ನಿಯಂತ್ರಣಕ್ಕೆ ಬಂದರೂ ಇಳುವರಿ ಕುಸಿತದ ಭೀತಿಯೂ ರೈತರನ್ನು ಕಾಡುತ್ತಿದೆ.

ರೈತರು ಪ್ರಾರಂಭಿಕ ಹಂತದಲ್ಲಿಯೇ ಕೀಟಬಾಧೆ ಗಮನಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ 10 ಲೀಟರ್ ನೀರಿಗೆ 5 ಗ್ರಾಂ ಇಮಾಮ್ಯಾಕ್ಟಿನ್ ಬೆಂಜೋವೇಟ್ ಅಥವಾ 10 ಎಂಎಲ್ ಕೋರೋಜನ್ ಕ್ರಿಮಿನಾಶಕ ಹಾಗೂ 30 ಗ್ರಾಂ ಕಾಂಪ್ಲೆಕ್ಸ್ ಬೆರೆಸಿ ಸಿಂಪಡಣೆ ಮಾಡಬೇಕು. ತೀವ್ರವಾಗಿ ರೋಗ ಭಾದಿಸುತ್ತಿರುವ ಜಮೀನುಗಳ ರೈತರು ತುರ್ತು ಪರಿಹಾರಕ್ಕಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು.-ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ