ಜಿಲ್ಲೆ

ಚಿಕನ್, ಮಟನ್ ಮಾಂಸ ದುಬಾರಿ

Prashanth S Suvarna

ಮಂಗಳೂರು: ಕರಾವಳಿಯಲ್ಲಿ ಕಳೆದ ಎರಡು ವಾರಗಳಿಂದ ಕೋಳಿ, ಆಡು, ಮೀನು ಹಾಗೂ ಕೆಲವೊಂದು ಬಗೆಯ ತರಕಾರಿಗಳು ದುಬಾರಿಯಾಗಿವೆ.
ಮಾರುಕಟ್ಟೆಯಲ್ಲಿ ಜೀವಂತ ಕೋಳಿಗೆ ಕೆ.ಜಿ.ಗೆ 190 ರೂ., ವಿದೌಟ್ ಸ್ಕಿನ್ ಕೋಳಿ ಮಾಂಸಕ್ಕೆ ಕೆ.ಜಿ.ಗೆ 260ರಿಂದ 290 ರೂ. ತನಕ ಏರಿಕೆ ಕಂಡಿದೆ. ಕೆಲವು ದಿನಗಳ ಹಿಂದೆ 230ರಿಂದ 250 ರೂ. ತನಕ ಏರಿಕೆಯಾಗಿತ್ತು. ವಿದ್ ಸ್ಕಿನ್ ಮಾಂಸಕ್ಕೆ 220ರಿಂದ 260 ರೂ.ಗೆ ಏರಿದೆ. ಮಟನ್‌ಗೆ 700 ರೂ. ಇದೆ. ಬನ್ನೂರು ಮಟನ್‌ಗೆ 800 ರೂ. ಇದೆ. ಎರಡು ತಿಂಗಳ ಅವಧಿಯಲ್ಲಿ ಸರಾಸರಿ 100 ರೂ. ಏರಿಕೆಯಾಗಿದೆ.

ಕಾರಣ ಏನು?

ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿ ಹೊಟ್ಟು, ಮೆಕ್ಕೆ ಜೋಳ, ಸೋಯಾ ಇವುಗಳ ಬೆಲೆ ಏರಿಕೆ, ಇಂಧನ ಬೆಲೆ ಹೆಚ್ಚಳದಿಂದ ಸಾಗಾಟ ವೆಚ್ಚ ಅಧಿಕವಾಗಿದೆ. ಮುಖ್ಯವಾಗಿ ಬಿಸಿಲಿನ ಝಳಕ್ಕೆ ಕೋಳಿಗಳು ಸಾವನ್ನಪ್ಪಿದ ಕಾರಣ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ದರ ಗಗನಕ್ಕೇರಿದೆ.
ಬಿಸಿಲಿನಿಂದಾಗಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ನೀರು ಹೆಚ್ಚು ಸೇವಿಸುವುದರಿಂದ ಕೋಳಿಯಲ್ಲಿ ಕೊಬ್ಬು ಪ್ರಮಾಣ ಹೆಚ್ಚಳವಾಗುವುದಿಲ್ಲ. ಬಿಸಿಲಿನ ಝಳ ತಾಳಲಾರದೆ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿದ ಕಾರಣ ಕೋಳಿ ಉತ್ಪಾದನೆ ಕಡಿಮೆಯಾಗಿ ಸಹಜವಾಗಿ ದರ ಹೆಚ್ಚಳವಾಗಿದೆ ಎಂದು ಅಂಗಡಿ ಮಾಲೀಕ ಜನಾರ್ದನ ತಿಳಿಸಿದ್ದಾರೆ.

ಈಗಾಗಲೇ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ತಾಜಾ ಮೀನು ಕೂಡ ಲಭ್ಯ ಇಲ್ಲದೆ ಇರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಬಿಪರ್‌ಜಾಯ್ ಚಂಡ ಮಾರುತದ ಪರಿಣಾಮದಿಂದ ನಾಡದೋಣಿ ಮೀನುಗಾರರು ಕೂಡ ಸಮುದ್ರಕ್ಕಿಳಿದಿಲ್ಲ. ಆದ್ದರಿಂದ ಮೀನು ಪ್ರಿಯರು ಕೋಳಿ ಖರೀದಿಗೆ ಮುಂದಾಗುವಂತಾಗಿದೆ.

ತರಕಾರಿ ದರವೂ ಹೆಚ್ಚಳ

ಟೊಮ್ಯಾಟೊ, ಶುಂಠಿ, ಅಲಸಂಡೆ, ಕೊತ್ತಂಬರಿ ಸೊಪ್ಪು ದರ ದುಪ್ಪಟ್ಟಾಗಿದೆ. ಅಲಸಂಡೆ ಕೆ.ಜಿ.ಗೆ 100 ರೂ. ತಲುಪಿದೆ. ಶುಂಠಿಗೆ ಕೆ.ಜಿ.ಗೆ 200 ರೂ., ಕೊತ್ತಂಬರಿ ಸೊಪ್ಪು 140ರಿಂದ 150 ರೂ.ಗೆ ಏರಿಕೆಯಾಗಿದೆ. ಟೊಮ್ಯಾಟೋ 40 ರೂ. ನಿಂದ 50 ರೂ., ಬೀನ್ಸ್ 100 ರೂ. ಇದೆ.

ಬೇಸಿಗೆಯಲ್ಲಿ ಕೋಳಿಗಳು ಸೆಕೆಗೆ ಸಾಯುವುದೇ ಹೆಚ್ಚು. ಈ ಅವಧಿಯಲ್ಲಿ ಕಾರ್ಯಕ್ರಮಗಳು ಅಧಿಕವಾಗಿರುವುದರಿಂದ ಬೇಡಿಕೆಯಷ್ಟು ಪೂರೈಕೆ ಇರುವುದಿಲ್ಲ. ಸಹಜವಾಗಿ ಬೆಲೆ ಏರಿಕೆಯಾಗುತ್ತಿದೆ. ಇನ್ನು ಕೋಳಿ ಮಾಂಸ ದರ ಇಳಿಕೆಯಾಗಲಿದೆ.- ಕಮಲಾಕ್ಷ, ಚಿಕನ್ ಸೆಂಟರ್ ಮಾಲೀಕ https://www.vijayavani.net/mutton-biryani-rs-32-chicken-biryani-rs-30-menu-card-from-2001-goes-viral https://www.vijayavani.net/s-eat-beef-said-by-bjp-mp